ಕರ್ನಾಟಕ

karnataka

ETV Bharat / bharat

ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ 2 ವರ್ಷ ಜೈಲು ಶಿಕ್ಷೆ: ರಾಹುಲ್​ ಸಂಸತ್​ ಸದಸ್ಯತ್ವಕ್ಕೆ ತೂಗುಗತ್ತಿಯೇ?

ಮೋದಿ ಉಪನಾಮದ ಕುರಿತ ವಿವಾದಿತ ಹೇಳಿಕೆ ಪ್ರಕರಣದಲ್ಲಿ ಕಾಂಗ್ರೆಸ್‌ ಸಂಸದ ರಾಹುಲ್ ಗಾಂಧಿ ದೋಷಿ ಎಂದು ನ್ಯಾಯಾಲಯ ಆದೇಶಿಸಿರುವ ಹಿನ್ನೆಲೆಯಲ್ಲಿ ಅವರ ಸಂಸತ ಸದಸ್ಯತ್ವದ​ ಸ್ಥಾನದಿಂದ ಅನರ್ಹತೆ ಬಗ್ಗೆ ಚರ್ಚೆ ಆರಂಭವಾಗಿದೆ.

rahul-gandhi-conviction-disqualification-from-parliament
ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ 2 ವರ್ಷ ಜೈಲು ಶಿಕ್ಷೆ: ಸಂಸದ ಸ್ಥಾನದಿಂದ ರಾಹುಲ್​ ಅನರ್ಹಕ್ಕೆ ದಾರಿ?

By

Published : Mar 23, 2023, 4:57 PM IST

Updated : Mar 23, 2023, 5:11 PM IST

ಹೈದರಾಬಾದ್:ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರನ್ನು ದೋಷಿ ಎಂದು ಗುಜರಾತ್‌ನ ಸೂರತ್ ಜಿಲ್ಲಾ ನ್ಯಾಯಾಲಯವು ತೀರ್ಪು ನೀಡಿದೆ. ಇದರ ಬೆನ್ನಲ್ಲೇ ತೀರ್ಪಿನ ಪರಿಣಾಮಗಳು ಹಾಗೂ ಮುಂದಿನ ರಾಜಕೀಯ ವಿಷಯಗಳು ವ್ಯಾಪಕ ಚರ್ಚೆಯನ್ನು ಹುಟ್ಟು ಹಾಕಿವೆ. ಈ ಅಪರಾಧವು 1951ರ ಜನತಾ ಪ್ರಾತಿನಿಧ್ಯ ಕಾಯ್ದೆ ಅಡಿಯಲ್ಲಿ ಸಂಸದ ಸ್ಥಾನದಿಂದ ಅನರ್ಹಗೊಳ್ಳುವ ಅಪಾಯ ಇದೆ ಎಂದು ಕಾನೂನು ತಜ್ಞರು ಹೇಳುತ್ತಾರೆ.

ಇದನ್ನೂ ಓದಿ:"ಸತ್ಯ, ಅಹಿಂಸೆಗೆ ಜಯ": ಮಾನಹಾನಿ ಪ್ರಕರಣ ತೀರ್ಪು ಬಳಿಕ ರಾಹುಲ್​ ಗಾಂಧಿ ಮಾರ್ಮಿಕ ಟ್ವೀಟ್​!

ಮೋದಿ ಉಪನಾಮದ ಕುರಿತ ವಿವಾದಿತ ಹೇಳಿಕೆ ಸಂಬಂಧ ಹಾಲಿ ಸಂಸದರೂ ಆದ ರಾಹುಲ್​ ಗಾಂಧಿ ಅವರಿಗೆ ನ್ಯಾಯಾಲಯವು ಎರಡು ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ. 1951ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 8(3) ಪ್ರಕಾರ ಯಾವುದೇ ಸಂಸತ್ತಿನ ಸದಸ್ಯರು ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಜೈಲು ಶಿಕ್ಷೆಗೆ ಗುರಿಯಾದರೆ, ತಮ್ಮ ಸ್ಥಾನದಿಂದ ಅನರ್ಹಗೊಳಿಸುವ ಅವಕಾಶ ಇದೆ. ಹೀಗಾಗಿ ರಾಹುಲ್​ ಗಾಂಧಿ ಕೂಡ ಅನರ್ಹಗೊಂಡರೆ, ಅವರ ಪ್ರತಿನಿಧಿಸುವ ವಯನಾಡ್ ಕ್ಷೇತ್ರ ತೆರವಾಗಲಿದೆ. ಈ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ಎದುರುವಾಗುವ ಸಾಧ್ಯತೆ ಇದೆ.

ತೀರ್ಪು ಪ್ರಶ್ನಿಸಲು ನಿರ್ಧಾರ: ಮತ್ತೊಂದೆಡೆ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 499ರ ಅಡಿಯಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಎರಡು ವರ್ಷಗಳ ಶಿಕ್ಷೆಯು ಅತ್ಯಂತ ವಿರಳ ಎಂದು ಕಾನೂನು ತಜ್ಞರು ತಿಳಿಸಿದ್ದಾರೆ. ಇದೇ ವೇಳೆ ರಾಹುಲ್​ ಗಾಂಧಿ ಎರಡು ವರ್ಷದ ಜೈಲು ಶಿಕ್ಷೆ ಪ್ರಕಟಿಸಿರುವ ಸೂರತ್ ಜಿಲ್ಲಾ ನ್ಯಾಯಾಲಯವು ತೀರ್ಪನ್ನು ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುತ್ತದೆ ಎಂದು ರಾಹುಲ್ ಗಾಂಧಿ ಅವರ ಕಾನೂನು ತಂಡ ತಿಳಿಸಿದೆ.

ಕೆಳ ಹಂತದ ನ್ಯಾಯಾಲಯದ ಜೈಲು ಶಿಕ್ಷೆಯನ್ನು ಅಮಾನತು ಮಾಡಬೇಕು ಮತ್ತು ಇಡೀ ಆದೇಶವನ್ನು ರದ್ದು ಮಾಡಬೇಕೆಂದು ಉನ್ನತ ನ್ಯಾಯಾಲಯದಲ್ಲಿ ಮನವಿ ಮಾಡಬಹುದು. ಇಲ್ಲಿ ರಾಹುಲ್​ ಪರವಾಗಿ ತೀರ್ಪು ಬರೆದಿದ್ದರೆ, ಸುಪ್ರೀಂಕೋರ್ಟ್‌ ಮೊರೆ ಹೋಗುವ ಸಾಧ್ಯತೆಯೂ ಇದೆ. ಒಂದು ವೇಳೆ ಯಾವುದೇ ಉನ್ನತ ನ್ಯಾಯಾಲಯವು ಶಿಕ್ಷೆಯನ್ನು ರದ್ದುಗೊಳಿಸದಿದ್ದರೆ, ಮುಂದಿನ ಆರು ವರ್ಷಗಳ ಕಾಲ ರಾಹುಲ್​ ಗಾಂಧಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಅವಕಾಶ ಇರುವುದಿಲ್ಲ ಎನ್ನುತ್ತಾರೆ ತಜ್ಞರು.

ಏನಿದು ಪ್ರಕರಣ?:ಕಳೆದ ಲೋಕಸಭೆ ಚುನಾವಣೆಗೆ ಮುನ್ನ 2019ರ ಏಪ್ರಿಲ್ 13ರಂದು ಕರ್ನಾಟಕದ ಕೋಲಾರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ರಾಹುಲ್ ಗಾಂಧಿ ಭಾಷಣ ಮಾಡಿದ್ದರು. ನೀರವ್ ಮೋದಿ, ಲಲಿತ್ ಮೋದಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಉಪನಾಮಗಳನ್ನು ಹೋಲಿಕೆ ಮಾಡಿ ರಾಜಕೀಯ ವಿಡಂಬನೆ ಮಾಡಿದ್ದರು.

''ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ.. ಇವರೆಲ್ಲರಿಗೂ ಮೋದಿ ಎಂಬ ಉಪನಾಮ ಇರುವುದು ಹೇಗೆ?. ಎಲ್ಲ ಕಳ್ಳರಿಗೂ ಮೋದಿ ಎಂಬುದೇ ಉಪನಾಮವಾಗಿದ್ದು ಹೇಗೆ?'' ಎಂದು ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಸಂಬಂಧಿಸಿದ್ದಂತೆ ರಾಹುಲ್​ ಗಾಂಧಿ ವಿರುದ್ಧ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಪ್ರಕರಣ ದಾಖಲಿಸಿದ್ದಾರೆ. ರಾಹುಲ್​ ಗಾಂಧಿ ಹೇಳಿಕೆ ಮಾನಹಾನಿಕರವಾಗಿದ್ದು, ಮೋದಿ ಕುಟುಂಬದ ಪ್ರತಿಷ್ಠೆಗೆ ಧಕ್ಕೆ ತಂದಿವೆ ಎಂದು ಆರೋಪಿಸಿದ್ದರು.

ಇತ್ತ, ರಾಹುಲ್​ ಗಾಂಧಿ ಈ ಆರೋಪವನ್ನು ನಿರಾಕರಿಸಿದ್ದರು. ತಮ್ಮ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಚಲಾಯಿಸಿರುವುದಾಗಿ ರಾಹುಲ್​ ವಾದಿಸಿದ್ದರು. ಆದಾಗ್ಯೂ, ನ್ಯಾಯಾಲಯವು ರಾಹುಲ್​ ಗಾಂಧಿ ಅವರನ್ನು ಕ್ರಿಮಿನಲ್ ಮಾನನಷ್ಟ ದೋಷಿ ಎಂದು ಪ್ರಕಟಿಸಿದೆ. ಇದೇ ವೇಳೆ ಈ ತೀರ್ಪಿನ ಇದರ ವಿರುದ್ಧ ರಾಹುಲ್​ ಮೇಲ್ಮನವಿ ಸಲ್ಲಿಸಲು 30 ದಿನಗಳ ಗಡುವು ನೀಡಲಾಗಿದೆ. ಆ ದಿನಗಳಿಗೆ ಜಾಮೀನು ಕೂಡ ಮಂಜೂರು ಮಾಡಲಾಗಿದೆ. ಅಲ್ಲಿಯವರೆಗೆ ಕೋರ್ಟ್​ ನೀಡಿದ ಶಿಕ್ಷೆ ಅಮಾನತಿನಲ್ಲಿದೆ.

ಇದನ್ನೂ ಓದಿ:2019ರ ಮಾನಹಾನಿ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ 2 ವರ್ಷ ಶಿಕ್ಷೆ, ಜಾಮೀನು ಮಂಜೂರು

Last Updated : Mar 23, 2023, 5:11 PM IST

ABOUT THE AUTHOR

...view details