ಮಹಾರಾಷ್ಟ್ರ(ಅಕೋಲಾ):ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯು ಇಂದು ಬೆಳಗ್ಗೆ ಅಕೋಲಾ ಜಿಲ್ಲೆಯ ಬಾಲಾಪುರದ ಕುಪ್ತದಲ್ಲಿರುವ ಜಿಲ್ಲಾ ಪರಿಷತ್ ಶಾಲೆಯಿಂದ ಬೆಳಗ್ಗೆ 6 ಗಂಟೆಗೆ ಪುನರಾರಂಭಗೊಂಡಿತು. ಬುಲ್ಧಾನ ಜಿಲ್ಲೆಯ ಶೆಗಾಂವ್‌ಗೆ ಪಾದಯಾತ್ರೆ ಸಾಗುತ್ತಿದ್ದು, ಅಲ್ಲಿ ಸಾರ್ವಜನಿಕ ರ‍್ಯಾಲಿಯನ್ನು ಉದ್ದೇಶಿಸಿ ರಾಹುಲ್ ಮಾತನಾಡಲಿದ್ದಾರೆ.
ಮಹಾತ್ಮ ಗಾಂಧಿಯವರ ಮರಿಮೊಮ್ಮಗ ತುಷಾರ್ ಗಾಂಧಿ ಸಹ ಯಾತ್ರೆಯಲ್ಲಿ ಭಾಗವಹಿಸಿ ಹೆಜ್ಜೆ ಹಾಕುವ ಮೂಲಕ ರಾಹುಲ್ ಗಾಂಧಿಗೆ ಸಾಥ್ ನೀಡಿದರು. ರಾಜ್ಯದಲ್ಲಿ 12ನೇ ದಿನದ ಯಾತ್ರೆ ಸಾಗುತ್ತಿದ್ದು, ಪಕ್ಷದ ಕಾರ್ಯಕರ್ತರು, ಮುಖಂಡರು ಭಾಗಿಯಾಗಿದ್ದಾರೆ.
72 ನೇ ದಿನಕ್ಕೆ ಕಾಲಿಟ್ಟ ಭಾರತ್ ಜೋಡೋ ಯಾತ್ರೆ ಇದನ್ನೂ ಓದಿ:ಭಾರತ್ ಜೋಡೋ ಯಾತ್ರೆ: ರಾಹುಲ್ ಗಾಂಧಿಯೊಂದಿಗೆ ಹೆಜ್ಜೆ ಹಾಕಿದ ನಟಿ ರಿಯಾ ಸೇನ್
ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾದ ಭಾರತ್ ಜೋಡೋ ಯಾತ್ರೆಯು ನವೆಂಬರ್ 7 ರಂದು ನಾಂದೇಡ್ ಜಿಲ್ಲೆಯ ಮೂಲಕ ಮಹಾರಾಷ್ಟ್ರವನ್ನು ಪ್ರವೇಶಿಸಿತು. ಇಲ್ಲಿಯವರೆಗೆ ಮಹಾರಾಷ್ಟ್ರದ ನಾಂದೇಡ್, ಹಿಂಗೋಲಿ, ವಾಶಿಮ್ ಮತ್ತು ಅಕೋಲಾ ಜಿಲ್ಲೆಗಳಲ್ಲಿ ಸಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನವೆಂಬರ್ 20 ರಂದು ಮಧ್ಯಪ್ರದೇಶದ ಬುರ್ಹಾನ್‌ಪುರವನ್ನು ಬುಲ್ಧಾನ ಜಿಲ್ಲೆಯ ಜಲಗಾಂವ್ ಜಮೋದ್ ಮೂಲಕ ಪ್ರವೇಶಿಸಲಿದೆ. ನವೆಂಬರ್ 21 ರಂದು ಯಾತ್ರೆಗೆ ವಿರಾಮ ನೀಡಲಾಗುವುದು ಎಂದು ಪಕ್ಷ ತಿಳಿಸಿದೆ.