ನವದೆಹಲಿ: "ಬಿಜೆಪಿ ಟೀಕೆಗಳಿಗೆ ನಾನು ಹೆದರುವುದಿಲ್ಲ. ಏಕೆಂದರೆ ಇದು ಧೈರ್ಯ ಮತ್ತು ಹೇಡಿತನದ ನಡುವಿನ ಹೋರಾಟ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು. ಒಂದು ವಾರಗಳ ಕಾಲ ಯುಕೆ ಪ್ರವಾಸದಲ್ಲಿರುವ ಅವರು ಭಾನುವಾರ ಲಂಡನ್ನಲ್ಲಿ ಆಯೋಜಿಸಿದ್ದ ಭಾರತೀಯ ಸಮುದಾಯದೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಈ ಹೇಳಿಕೆ ನೀಡಿದರು.
"ನನ್ನ ವಿರುದ್ದ ಎಷ್ಟೇ ಟೀಕೆಗಳನ್ನು ಮಾಡಿದರೂ ಅದು ನನಗೆ ಒಳ್ಳೆಯದೇ. ಏಕೆಂದರೆ ಇದು ಗೌರವ-ಅಗೌರವ, ಧೈರ್ಯ-ಹೇಡಿತನ, ಪ್ರೀತಿ-ದ್ವೇಷದ ನಡುವಿನ ಹೋರಾಟ. ದ್ವೇಷದ ಮಾರುಕಟ್ಟೆಯಲ್ಲಿ ನಾವು ಪ್ರೀತಿಯ ಅಂಗಡಿಯನ್ನು ತೆರೆಯಲು ಬಂದಿದ್ದೇವೆ ಎಂದು ಈ ಹಿಂದೆ ನಾನು ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ಹೇಳಿದ್ದೆ" ಎಂದರು.
"ಒಬ್ಬ ಭಾರತ ಮೂಲದ ರಾಜಕೀಯ ನಾಯಕನಿಗೆ ಕೇಂಬ್ರಿಡ್ಜ್, ಹಾರ್ವರ್ಡ್ನಂತಹ ವಿಶ್ವವಿದ್ಯಾಲಯಗಳಲ್ಲಿ ಮಾತನಾಡಲು ಅವಕಾಶ ದೊರೆಯುತ್ತದೆ. ಆದರೆ ತನ್ನದೇ ದೇಶದ ವಿಶ್ವವಿದ್ಯಾಲಯಗಳಲ್ಲಿ ಸಂವಾದ ನಡೆಸಲು ಅವಕಾಶ ದೊರೆಯದಂತಹ ಸ್ಥಿತಿ ಇದೆ. ಇದಕ್ಕೆ ಕಾರಣ ಈಗಿನ ಸರ್ಕಾರ. ಅವರು ಸುಲಭವಾಗಿ ಪ್ರತಿಪಕ್ಷದ ಯಾವುದೇ ಕಲ್ಪನೆಗಳು ಮತ್ತು ವಿರೋಧಗಳನ್ನು ಒಪ್ಪುವುದಿಲ್ಲ. ಈ ಹಿಂದೆ ಪಾರ್ಲಿಮೆಂಟ್ನಲ್ಲಿ ನೋಟ್ ಬ್ಯಾನ್, ಜಿಎಸ್ಟಿಯಂತಹ ಪ್ರಮುಖ ವಿಷಯದ ಬಗ್ಗೆ ಧ್ವನಿ ಎತ್ತಲು ನಮಗೆ ಅವಕಾಶವನ್ನೇ ಕೊಡಲಿಲ್ಲ. ಅದೇ ಪರಿಸ್ಥಿತಿಯನ್ನು ವಿಶ್ವವಿದ್ಯಾಲಯಗಳಲ್ಲಿಯೂ ಮಾಡಲಾಗುತ್ತಿದೆ. ಇದು ನಾಚಿಕೆಗೇಡಿನ ಸಂಗತಿ. ಪರಸ್ಪರ ಅಭಿಪ್ರಾಯಗಳನ್ನು ಕೇಳುವ, ಗೌರವಿಸುವ ಹಾಗೂ ತಮ್ಮ ಬುದ್ದಿವಂತಿಕೆಯ ಬಗ್ಗೆ ಹೆಮ್ಮ ಪಡುವಂತಹ ವಾತಾವರಣವಿದ್ದಂತಹ ದೇಶ ಭಾರತ. ಆದರೀಗ ಆ ವಾತಾವರಣ ಸಂಪೂರ್ಣ ನಾಶವಾಗಿದೆ" ಎಂದು ನುಡಿದರು.