ಅಸ್ಸಾಂ: ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆ ಗುರುವಾರ ಅಸ್ಸಾಂ ತಲುಪಿತು. 5ನೇ ದಿನವಾದ ಇಂದು ನಾಗಾಲ್ಯಾಂಡ್‌ನ ತುಲಿಯಿಂದ ಅಸ್ಸಾಂ ಪ್ರವೇಶಿಸಿತು. ಈ ವೇಳೆ ಮಾತನಾಡಿದ ಅವರು, ಅಸ್ಸಾಂ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ರಾಜ್ಯ ಸರ್ಕಾರ ಭ್ರಷ್ಟ ಎಂದರು.
ಮಣಿಪುರದ ವಿಷಯ ಪ್ರಸ್ತಾಪಿಸಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದ ರಾಹುಲ್ ಗಾಂಧಿ, ಈಶಾನ್ಯ ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ಅವರು ಸೋತಿದ್ದಾರೆ. ಮೋದಿ ಕಳೆದ ಒಂಬತ್ತು ವರ್ಷಗಳಿಂದ ಇದೇ ಸುಳ್ಳುಗಳನ್ನು ಹೇಳಿಕೊಂಡು ಬರುತ್ತಿದ್ದಾರೆ. ಮಣಿಪುರದಲ್ಲಿ ಬೂದಿ ಮುಚ್ಚಿದ ವಾತಾವರಣವಿದೆ. ಇಲ್ಲಿಯವರೆಗೂ ರಾಜ್ಯಕ್ಕೆ ಅವರು ಭೇಟಿ ನೀಡಿಲ್ಲ. ಅಧಿಕಾರಕ್ಕೆ ಬರುವ ಮುನ್ನವೇ ನಾಗಾಲ್ಯಾಂಡ್ಗೆ ಭರವಸೆಯೊಂದನ್ನು ನೀಡಿದ್ದರು. ಇದೂ ಕೂಡ ಬಗೆಹರಿಸಿಲ್ಲ. ಬಿಕ್ಕಟ್ಟಿನಿಂದ ಹೊರಬರಲು ಅಂದು ಒಪ್ಪಂದಕ್ಕೂ ಸಹಿ ಹಾಕಿದ್ದರು. ಆ ಒಪ್ಪಂದ ಏನಾಯಿತೆಂದು ನಾಗಾಲ್ಯಾಂಡ್ ಜನರು ಇಂದೂ ಸಹ ಕೇಳುತ್ತಿದ್ದಾರೆ. ಪ್ರಧಾನಿ ಅದಕ್ಕೂ ಸಹ ಮೌನ ವಹಿಸಿದ್ದಾರೆ. ರಾಜ್ಯ ಇನ್ನೂ ಪರಿಹಾರಕ್ಕಾಗಿ ಕಾಯುತ್ತಿದೆ. ದಶಕಗಳಷ್ಟು ಹಳೆಯದಾದ ನಾಗಾ ರಾಜಕೀಯ ಬಿಕ್ಕಟ್ಟನ್ನು ಪರಿಹರಿಸಲು ಕಾಂಗ್ರೆಸ್ ಬದ್ಧ ಎಂದು ಹೇಳಿದರು.
ಕಾಂಗ್ರೆಸ್ ನಡೆಸುತ್ತಿರುವ ನ್ಯಾಯ್ ಯಾತ್ರೆಗೆ ನಾಗಾಲ್ಯಾಂಡ್‌ನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅಸ್ಸಾಂನಲ್ಲಿಯೂ ಇದೇ ರೀತಿಯ ಪ್ರತಿಕ್ರಿಯೆ ಸಿಗುವ ವಿಶ್ವಾಸವಿದೆ ಎಂದರು. ರಾಜ್ಯದಲ್ಲಿ ಬಿಜೆಪಿ ಭ್ರಷ್ಟ ಸರ್ಕಾರ ನಡೆಸುತ್ತಿರುವ ಕಾರಣ ಅಸ್ಸಾಂನ ಜನರಿಗೂ ಇದೇ ರೀತಿಯ ಅನುಭವವಾಗುತ್ತಿದೆ. ಮಹಾನ್ ವೈಷ್ಣವ ಸಂತ ಶ್ರೀಮಂತ ಶಂಕರದೇವ್ ಅವರ ಅನುಗ್ರಹದಿಂದ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಮೂಲಕ ಕಾಂಗ್ರೆಸ್ ಅಸ್ಸಾಂನ ಜನರೊಂದಿಗೆ ಮತ್ತೆ ಸಂಪರ್ಕ ಸಾಧಿಸುತ್ತದೆ ಎಂದು ತಿಳಿಸಿದರು.