ನವದೆಹಲಿ:ಕೊರೊನಾ ಮೂರನೇ ಅಲೆಯು ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎಂದು ತಜ್ಞರು ಹೇಳಿದ್ದು, ನರೇಂದ್ರ ಮೋದಿ ಸರ್ಕಾರದ ಸನ್ನದ್ಧತೆ ಮತ್ತು ಯೋಜನೆಗಳ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಳವಳ ವ್ಯಕ್ತಪಡಿಸಿದ್ದಾರೆ.
"ಮುಂಬರಲಿರುವ ದಿನಗಳಲ್ಲಿ ಮಕ್ಕಳಿಗೆ ಕೋವಿಡ್ನಿಂದ ರಕ್ಷಣೆ ಬೇಕಾಗುತ್ತದೆ. ಮಕ್ಕಳ ಆರೋಗ್ಯ ಸೇವೆಗಳು ಮತ್ತು ಲಸಿಕೆ-ಚಿಕಿತ್ಸೆಯ ಮಾರ್ಗಸೂಚಿಗಳು ಈಗಾಗಲೇ ಜಾರಿಯಲ್ಲಿರಬೇಕಿತ್ತು. ಪ್ರಸ್ತುತ ಮೋದಿ ಸರ್ಕಾರದ ವ್ಯವಸ್ಥೆಯನ್ನು ನಿದ್ರೆಯಿಂದ ಎಚ್ಚರಗೊಳಿಸುವುದು ಭಾರತದ ಭವಿಷ್ಯದ ಅಗತ್ಯತೆಯಾಗಿದೆ" ಎಂದು ರಾಗಾ ಟ್ವೀಟ್ ಮಾಡಿದ್ದಾರೆ.
ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ಜೈವೀರ್ ಶೆರ್ಗಿಲ್, " ಡಾರ್ಕ್ ಚಾಕೊಲೇಟ್ ತಿನ್ನುವುದು ಮತ್ತು ಗೋಮೂತ್ರವನ್ನು ಕುಡಿಯುವ ಸಲಹೆಯನ್ನು ನೀಡುವುದನ್ನು ಬಿಟ್ಟು ಕೋವಿಡ್ 3ನೇ ಅಲೆಯನ್ನು ಗಮನದಲ್ಲಿಟ್ಟುಕೊಂಡು, ವಿಶೇಷವಾಗಿ ಭಾರತದ ಮಕ್ಕಳಿಗಾಗಿ ಬಿಜೆಪಿ ಸರ್ಕಾರ ಸಿದ್ಧತೆ ನಡೆಸುವುದು ಒಳಿತು ಎಂದು ತಿಳಿಸಿದ್ದಾರೆ.
ಅಮೆರಿಕ ಸೇರಿದಂತೆ ಕೆಲ ದೇಶಗಳು 12-15 ವರ್ಷ ವಯಸ್ಸಿನ ಮಕ್ಕಳಿಗೆ ಕೊರೊನಾ ಲಸಿಕೆ ನೀಡಲು ಮುಂದಾಗಿವೆ. ಭಾರತದಲ್ಲಿನ್ನೂ 18 ವರ್ಷ ಮೇಲ್ಪಟ್ಟವರಿಗೆ ಸರಿಯಾಗಿ ಲಸಿಕೆ ಸಿಗುತ್ತಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಅನೇಕ ಟೀಕೆಗಳಿಗೆ ಗುರಿಯಾಗಿದೆ.