ಲತೇಹರ್: ಜಾರ್ಖಂಡ್‌ನ ಲತೇಹರ್ ಜಿಲ್ಲೆಯ ತರ್ವಾಡಿ ಪಂಚಾಯತ್‌ನ ಜನರ ಪಾಲಿಗೆ ರಾಧಾ ದೇವಿಯೇ ಜೀವದಾತೆ. ಕಷ್ಟದಲ್ಲಿರುವವರ ಕರೆ ಕೇಳಿ ರಾಧಾ ಓಡಿ ಬರುತ್ತಾರೆ. ಆಶ್ಚರ್ಯಕರ ಸಂಗತಿಯೆಂದರೆ, ನೂರಾರು ಜನರ ಪ್ರಾಣವನ್ನು ರಾಧಾ ಉಳಿಸಿದ್ದಾರೆ. ಆದರೆ, ಸುಮಾರು 16 ವರ್ಷಗಳ ಹಿಂದೆ ತನ್ನ ಗಂಡನ ಚಿತ್ರಹಿಂಸೆಯಿಂದ ಬೇಸರಗೊಂಡ ರಾಧಾ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು ಎಂಬುದು ಅಚ್ಚರಿಯಾದರೂ ಸತ್ಯ.
ಎಲ್ಲರ ರಾಧಾ.... ಈ ರಾಧಾದೇವಿ ರಾಧಾ ದೇವಿಯ ಹಿಂದಿನ ಜೀವನ ಬಹಳ ನೋವಿನಿಂದ ಕೂಡಿತ್ತು. ಪತಿಯ ಕಿರುಕುಳದಿಂದ ರೋಸಿ ಹೋದ ಇವರು, ಕಾರ್ಮಿಕರಾಗಿ ಕೆಲಸ ಮಾಡಿ ಮಕ್ಕಳನ್ನು ನೋಡಿಕೊಂಡಿದ್ದರು. ಸದಾ ಕುಡಿದು ಮತ್ತಿನಲ್ಲೇ ಇರುತ್ತಿದ್ದ ರಾಧಾ ದೇವಿಯ ಗಂಡ, ಅವರನ್ನು ನಿರ್ದಾಕ್ಷಿಣ್ಯವಾಗಿ ಹೊಡೆಯುತ್ತಿದ್ದರಂತೆ. ಗಂಡನ ಚಿತ್ರಹಿಂಸೆಯಿಂದ ಬೇಸತ್ತ ರಾಧಾ ಆತ್ಮಹತ್ಯೆಗೆ ಯತ್ನಿಸಿದ್ದರಂತೆ. ಘಟನೆಯಲ್ಲಿ ಅವರ ಮುಖ ತೀವ್ರವಾಗಿ ಸುಟ್ಟುಹೋಯಿತು. ಆದರೆ, ಅದೃಷ್ಟವೆಂಬಂತೆ ರಾಧಾ ಬದುಕುಳಿದರು.
ಕೆಲದಿನಗಳ ಬಳಿಕ ಸುಟ್ಟಗಾಯಗಳಿಂದ ರಾಧಾ ಚೇತರಿಸಿಕೊಂಡರು. ಅದೇ ವೇಳೆ ಗ್ರಾಮಕ್ಕೆ ಆರೋಗ್ಯ ಕಾರ್ಯಕರ್ತರ ನೇಮಕ ನಡೆಯುತ್ತಿತ್ತು. ರಾಧಾ ಸಹಿಯಾ ಗ್ರಾಮದ ಆರೋಗ್ಯ ಕಾರ್ಯಕರ್ತೆಯಾಗಿ ಆಯ್ಕೆಯಾದರು. ಅದು ಅವರ ಜೀವನದಲ್ಲಿ ಬೆಳಕು ನೀಡಿತು. ಆರೋಗ್ಯ ಕಾರ್ಯಕರ್ತರಾಗಿ ಅವರು, ಗ್ರಾಮದಲ್ಲಿ ಗರ್ಭಿಣಿ ಮಹಿಳೆಯರಿಗೆ ಮನೆಯಲ್ಲಿಯೇ ಹೆರಿಗೆ ಮಾಡಿಸುವ ಬದಲಾಗಿ ಆಸ್ಪತ್ರೆಗಳಿಗೆ ಕರೆದೊಯ್ಯುವಂತೆ ಜನರಿಗೆ ಮನವರಿಕೆ ಮಾಡಿದರು.
ಮನೆಯಲ್ಲಿ ಹೆರಿಗೆ ಮಾಡುವುದರಿಂದಾಗುವ ಅಡ್ಡ ಪರಿಣಾಮಗಳ ಬಗ್ಗೆ ಜನರಿಗೆ ತಿಳಿಸಿದರು. ಹಗಲು ರಾತ್ರಿ, ಅಗತ್ಯವಿರುವವರಿಗೆ ಸಹಾಯ ಮಾಡಲು ಶ್ರಮಿಸಿದರು. ನಿತ್ಯ ರಾಧಾ ತನ್ನ ಮೇಲ್ವಿಚಾರಣೆಯಲ್ಲಿ ಹಳ್ಳಿಗಳಿಗೆ ಭೇಟಿ ನೀಡುತ್ತಾರೆ. ಟಿಬಿ ಸೇರಿದಂತೆ ಇತರ ಕಾಯಿಲೆ ಇರುವ ರೋಗಿಗಳ ಆರೋಗ್ಯದ ಮಾಹಿತಿ ಸಂಗ್ರಹಿಸುತ್ತಾರೆ. ಸದಾಕಾಲ ನಿರ್ಗತಿಕರಿಗೆ ಸಹಾಯ ಮಾಡಲು ಸಿದ್ಧರಾಗಿರುವ ರಾಧಾ ಅವರನ್ನು ಈಗ ಗ್ರಾಮಸ್ಥರು ರಾಧಾ ದೀದಿ ಎಂದು ಪ್ರೀತಿಯಿಂದ ಕರೆಯುತ್ತಾರೆ.
ಆರೋಗ್ಯ ಕಾರ್ಯಕರ್ತೆಯಾಗಿ ನೇಮಕಗೊಂಡ ಬಳಿಕ ಸಮಾಜಕ್ಕಾಗಿ ಏನಾದರೂ ಮಾಡಬೇಕೆಂಬ ಸಂಕಲ್ಪ ತೊಟ್ಟ ರಾಧಾ, ಗ್ರಾಮದ ಜನರಿಗಾಗಿ ಕಾರ್ಯಪ್ರವೃತ್ತರಾಗಿರುತ್ತಾರೆ. ಅಂದು ತಮ್ಮ ಸ್ವಂತ ಜೀವನದ ಭರವಸೆಯನ್ನು ಕಳೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ರಾಧಾ ಇಂದು ಇತರರಿಗೆ ಜೀವ ನೀಡುತ್ತಿದ್ದಾರೆ.
ತಮ್ಮ ನಿಸ್ವಾರ್ಥ ಸೇವೆಗಾಗಿ ರಾಧಾ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ರಾಧಾ ಅನೇಕ ಗೌರವಗಳನ್ನು ಪಡೆದಿದ್ದಾರೆ. ರಾಧಾ ಅವರ ಸಮರ್ಪಣೆ ಮತ್ತು ಬದ್ಧತೆಯನ್ನು ನೋಡಿ, ಹಳ್ಳಿಯ ಜನರು ಅವರನ್ನು ತುಂಬಾ ಗೌರವಿಸುತ್ತಾರೆ. ಗ್ರಾಮದ ಜನರ ಪ್ರೀತಿಯಲ್ಲಿ ರಾಧಾ ತಮ್ಮ ಕಷ್ಟದ ದಿನಗಳನ್ನು ಮತ್ತು ಅನುಭವಿಸಿದ ನೋವನ್ನು ಮರೆತಿದ್ದಾರೆ. ತಮ್ಮ ಜೀವನವು ಇತರರಿಗೆ ಉಪಯುಕ್ತವಾಗಿದೆ ಎಂಬುದಕ್ಕೆ ರಾಧಾ ಸಂತ ವ್ಯಕ್ತಪಡಿಸುತ್ತಾರೆ.
ರಾಧಾ ಇಂದು ಸಮಾಜಕ್ಕೆ ಒಂದು ಉದಾಹರಣೆಯಾಗಿದ್ದಾರೆ. ಕಷ್ಟಗಳ ಮುಂದೆ ಸೋಲನ್ನು ಒಪ್ಪಿಕೊಳ್ಳುವವರಿಗೆ ರಾಧಾ ದೇವಿಯೇ ಅತ್ಯುತ್ತಮ ಪಾಠವಾಗಿದ್ದಾರೆ.