ನವದೆಹಲಿ: ದಕ್ಷಿಣ ಏಷ್ಯಾದ ವಿಶ್ವವಿದ್ಯಾನಿಲಯಗಳ ಪೈಕಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ಕ್ಯೂಎಸ್ ವರ್ಲ್ಡ್ ಯೂನಿವರ್ಸಿಟಿ ಶ್ರೇಯಾಂಕಗಳ ಟಾಪ್ 200ರಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ.
ಕ್ವಾಕ್ವಾರೆಲ್ಲಿ ಸೈಮಂಡ್ಸ್ (ಕ್ಯೂಎಸ್) ರ್‍ಯಾಕಿಂಗ್ ಪಟ್ಟಿಯ 19 ನೇ ಆವೃತ್ತಿ ಬಿಡುಗಡೆಯಾಗಿದ್ದು, ಭಾರತದ ಮೂರು ವಿಶ್ವವಿದ್ಯಾಲಗಳು ಟಾಪ್ 200ರಲ್ಲಿ ಸ್ಥಾನ ಪಡೆದಿವೆ. ಕ್ಯೂಎಸ್ ರ್‍ಯಾಕಿಂಗ್ ಪಟ್ಟಿಯಲ್ಲಿ ಐಐಎಸ್‌ಸಿ ಬೆಂಗಳೂರು 155ನೇ ಸ್ಥಾನ ಪಡೆದು ಭಾರತದ ವಿಶ್ವವಿದ್ಯಾಲಯಗಳ ಪೈಕಿ ಅಗ್ರಸ್ಥಾನದಲ್ಲಿದೆ.
ಭಾರತದಲ್ಲಿ ಐಐಎಸ್ಸಿಯೇ ಟಾಪ್:ಹೌದು, ಬೆಂಗಳೂರು ಮೊದಲನೇ ಸ್ಥಾನ ಪಡೆದ್ರೆ, ಕ್ಯೂಎಸ್ ರ್‍ಯಾಕಿಂಗ್ ಪಟ್ಟಿಯಲ್ಲಿ 172 ನೇ ಸ್ಥಾನವನ್ನು ಪಡೆದಿರುವ ಬಾಂಬೆಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಭಾರತದ ಎರಡನೇ ಅತ್ಯುತ್ತಮ ಸಂಸ್ಥೆಯಾಗಿದೆ. ಬಳಿಕ ಹನ್ನೊಂದು ಸ್ಥಾನ ಮೇಲೇರಿ 174 ನೇ ಸ್ಥಾನವನ್ನು ಪಡೆದುಕೊಂಡಿರುವ ಐಐಟಿ ದೆಹಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.
ಓದಿ:NIRF ರ‍್ಯಾಂಕಿಂಗ್ ಪಟ್ಟಿ ಬಿಡುಗಡೆ : 76 ರಿಂದ 19ನೇ ರ್ಯಾಂಕ್ಗೆ ಜಿಗಿದ ಮೈಸೂರು ವಿವಿ
ಕ್ಯೂಸ್ ವರ್ಲ್ಡ್ನಲ್ಲಿ IIT ಕಾನ್ಪುರ್ 264ನೇ ಸ್ಥಾನವನ್ನು ಗಳಿಸುವ ಮೂಲಕ ಈ ಶ್ರೇಯಾಂಕಗಳ ಇತಿಹಾಸದಲ್ಲಿ ಅತ್ಯುನ್ನತ ಸ್ಥಾನವನ್ನು ಪಡೆದಿದೆ. 369ನೇ ಸ್ಥಾನ ಅಲಂಕರಿಸಿರುವ IIT ರೂರ್ಕಿ ಕಳೆದ ಬಾರಿಗಿಂತ ಈ ಬಾರಿ ಸುಧಾರಣೆ ಕಂಡಿದ್ದು, 31 ಸ್ಥಾನಗಳನ್ನು ಜಂಪ್ ಮಾಡಿ ತನ್ನ ಅತ್ಯುನ್ನತ ಶ್ರೇಣಿಗೆ ತಲುಪಿದೆ.
IIT ಗುವಾಹಟಿಯು ಕಳೆದ ಬಾರಿಗಿಂತ ಈ ಬಾರಿ ಹನ್ನೊಂದು ಸ್ಥಾನಗಳ ಮೇಲೆಕ್ಕೇರಿದೆ. IIT ಇಂದೋರ್ ಚೊಚ್ಚಲ ಆವೃತ್ತಿಯಲ್ಲೇ ಜಾಗತಿಕವಾಗಿ 396 ನೇ ಸ್ಥಾನ ಪಡೆದುಕೊಂಡಿದೆ. ಶ್ರೇಯಾಂಕಗಳ ಪ್ರಕಾರ OP ಜಿಂದಾಲ್ ಗ್ಲೋಬಲ್ ವಿಶ್ವವಿದ್ಯಾನಿಲಯವು ಸತತ ಮೂರನೇ ವರ್ಷಕ್ಕೆ ಅತ್ಯುನ್ನತ ಶ್ರೇಣಿಯ ಖಾಸಗಿ ವಿಶ್ವವಿದ್ಯಾಲಯವಾಗಿ ಹೊರ ಹೊಮ್ಮಿದೆ.
ಒಟ್ಟು 41 ಭಾರತೀಯ ವಿಶ್ವವಿದ್ಯಾನಿಲಯಗಳು ಶ್ರೇಯಾಂಕದಲ್ಲಿ ಕಾಣಿಸಿಕೊಂಡಿದ್ದು, ಅದರಲ್ಲಿ 12 ಸುಧಾರಿಸಿದೆ, 12 ಸ್ಥಿರವಾಗಿದೆ, 10 ಇಳಿಕೆ ಕಂಡಿವೆ ಮತ್ತು ಏಳು ವಿಶ್ವವಿದ್ಯಾಲಯಗಳು ಹೊಸ ಪ್ರವೇಶಗಳಾಗಿವೆ.
ಶ್ರೇಯಾಂಕಗಳ ಪ್ರಕಾರ, 13 ಭಾರತೀಯ ವಿಶ್ವವಿದ್ಯಾನಿಲಯಗಳು ಜಾಗತಿಕ ಸ್ಪರ್ಧಿಗಳಿಗೆ ಹೋಲಿಸಿದರೆ ಉತ್ತಮ ಸಾಧನೆ ತೋರುವತ್ತ ಸಾಗುತ್ತಿವೆ. ಭಾರತೀಯ ವಿಶ್ವವಿದ್ಯಾನಿಲಯಗಳು QS ನ ಸಾಂಸ್ಥಿಕ ಬೋಧನಾ ಸಾಮರ್ಥ್ಯದ ಅಳತೆಯೊಂದಿಗೆ ಹೋರಾಟ ಮುಂದುವರೆಸುತ್ತಿವೆ.