ನವದೆಹಲಿ: ಭಾರತೀಯ ನೌಕಾಪಡೆಯ ಎಂಟು ಮಾಜಿ ಯೋಧರಿಗೆ ಕತಾರ್ ಮರಣದಂಡನೆ ವಿಧಿಸಿರುವುದು ಇಸ್ರೇಲ್-ಪ್ಯಾಲೆಸ್ಟೈನ್ ಯುದ್ಧದ ಬಗ್ಗೆ ಭಾರತದ ನಿಲುವಿನ ಪರಿಣಾಮವಾಗಿರಬಹುದು ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಡಾ.ಫಾರೂಕ್ ಅಬ್ದುಲ್ಲಾ ಸೋಮವಾರ ಹೇಳಿದರು.
ಈಟಿವಿ ಭಾರತ್ ಜೊತೆ ದೂರವಾಣಿಯಲ್ಲಿ ಮಾತನಾಡಿದ ಅಬ್ದುಲ್ಲಾ, ಕತಾರ್ ಮೂರು ವರ್ಷಗಳಿಂದ ಈ ವಿಷಯದ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಭಾರತವು ಇಸ್ರೇಲ್ನೊಂದಿಗೆ ಸ್ನೇಹ ಸಂಬಂಧವನ್ನು ಕಾಪಾಡಿಕೊಂಡು, ಅದೇ ಸಮಯದಲ್ಲಿ ಪ್ಯಾಲೆಸ್ಟೈನ್ ಬಿಕ್ಕಟ್ಟಿನ ಬಗ್ಗೆ ಸಹಾನುಭೂತಿ ತೋರುವ ಮೂಲಕ ಸಮತೋಲನ ಸಾಧಿಸುವ ಪ್ರಯತ್ನದ ಮಧ್ಯೆ ಕತಾರ್ ಇಂಥ ತೀರ್ಪು ನೀಡಿದ್ದು ಆಶ್ಚರ್ಯಕರವಾಗಿದೆ ಎಂದು ಹೇಳಿದರು. ಅಕ್ಟೋಬರ್ 27ರಂದು ವಿಶ್ವಸಂಸ್ಥೆಯಲ್ಲಿ ನಡೆದ ಗಾಜಾ ಕದನ ವಿರಾಮದ ಮೇಲಿನ ಮತದಾನದಿಂದ ಭಾರತ ಗೈರಾಗಿದ್ದು, ದೇಶ ಇಸ್ರೇಲ್ ಪರ ಒಲವು ಹೊಂದಿದೆ ಎಂಬ ಭಾವನೆ ಮೂಡಿದೆ.
ಅಕ್ಟೋಬರ್ 26 ರಂದು ಕತಾರ್ನ ನ್ಯಾಯಾಲಯವು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ನೌಕಾಪಡೆಯ ಎಂಟು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದೆ. ಈ ತೀರ್ಪಿಗೆ ಭಾರತದ ವಿದೇಶಾಂಗ ಸಚಿವಾಲಯ ತೀವ್ರ ಆಘಾತ ವ್ಯಕ್ತಪಡಿಸಿದ್ದು, ಕಾನೂನಿನ ಪ್ರಕಾರ ಮುಂದಿನ ಕ್ರಮ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದೆ. ಎಂಟು ಜನರ ವಿರುದ್ಧದ ಆರೋಪಗಳನ್ನು ಬಹಿರಂಗಗೊಳಿಸಲಾಗಿಲ್ಲ. ಆದಾಗ್ಯೂ, ಮಾಧ್ಯಮ ವರದಿಗಳ ಪ್ರಕಾರ ರಹಸ್ಯ ಮಾಹಿತಿಯನ್ನು ಮತ್ತೊಂದು ದೇಶಕ್ಕೆ ರವಾನಿಸಿದ ಅನುಮಾನದ ಮೇಲೆ ಅವರನ್ನು ಬಂಧಿಸಲಾಗಿದೆ.