ಪಶ್ಚಿಮ ಚಂಪಾರಣ್, ಬಿಹಾರ: ಮಾನವ ಮತ್ತು ವನ್ಯಜೀವಿ ಸಂಘರ್ಷಕ್ಕೆ ಇದು ಮತ್ತೊಂದು ಉದಾಹರಣೆ. ಇಲ್ಲಿರುವ ವಾಲ್ಮೀಕಿ ಹುಲಿ ಸಂರಕ್ಷಿತ ತಾಣದ ಪ್ರಾಣಿಗಳು ಸುತ್ತಮುತ್ತಲಿನ ಹಳ್ಳಿಗಳಿಗೆ ಆಗಾಗ ಪ್ರವೇಶಿಸಿ, ಜನರಲ್ಲಿ ಆತಂಕವನ್ನು ಉಂಟು ಮಾಡುತ್ತಿವೆ. ಕೆಲವೊಮ್ಮೆ ಕರಡಿ ಮತ್ತು ಚಿರತೆ ಸೇರಿದಂತೆ ಕಾಡುಪ್ರಾಣಿಗಳು ಗ್ರಾಮಸ್ಥರ ಮೇಲೆ ಮತ್ತು ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿರುವ ಬೆನ್ನಲ್ಲೇ, ಹೆಬ್ಬಾವೊಂದು ಮೇಕೆಯೊಂದನ್ನು ಕೊಂದಿದೆ.
ವಾಲ್ಮೀಕಿನಗರದ ಟೀನಾ ಶೆಡ್ ಸಮೀಪದಲ್ಲಿ ಈ ಘಟನೆ ನಡೆದಿದ್ದು, ಮೇಕೆಯನ್ನು ಹೆಬ್ಬಾವು ನುಂಗುವ ಯತ್ನವನ್ನು ಸ್ಥಳೀಯರು ವಿಫಲಗೊಳಿಸಿದ್ದಾರೆ. ಹೆಬ್ಬಾವು ಸುಮಾರು 13ರಿಂದ 14 ಅಡಿ ಉದ್ದವಿತ್ತು ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಮೊಬೈಲ್ನಲ್ಲಿ ವಿಡಿಯೋವನ್ನು ಸೆರೆ ಹಿಡಿಯಲಾಗಿದ್ದು, ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ. ಬಾಲಕನೋರ್ವ ಮೇಕೆಗಳನ್ನು ಮೇಯಿಸಲು ಬಂದಿದ್ದನು.
ಈ ವೇಳೆ ಪೊದೆಯಲ್ಲಿದ್ದ ಹೆಬ್ಬಾವು ಮೇಕೆ ಮೇಲೆ ದಾಳಿ ಮಾಡಿದೆ. ಮೇಕೆಯ ಚೀರಾಟ ಕೇಳಿ ಗ್ರಾಮಸ್ಥರು ಅಲ್ಲಿಗೆ ತಲುಪುವಷ್ಟರಲ್ಲಿ ಮೇಕೆ ಸಾವನ್ನಪ್ಪಿತ್ತು. ಸ್ಥಳೀಯರು ಹೆಬ್ಬಾವಿನ ಮೇಲೆ ಇಟ್ಟಿಗೆ ಮತ್ತು ಕಲ್ಲುಗಳನ್ನು ಎಸೆದಿದ್ದಾರೆ. ಸಾಕಷ್ಟು ಪ್ರಯತ್ನದ ನಂತರ ಬೃಹತ್ ಹೆಬ್ಬಾವನ್ನು ಜನರು ಓಡಿಸಿದ್ದಾರೆ.