ಬರ್ಮಿಂಗ್‌ಹ್ಯಾಮ್:ಗುರುವಾರ ಬರ್ಮಿಂಗ್‌ಹ್ಯಾಮ್‌ನ ಅಲೆಕ್ಸಾಂಡರ್ ಸ್ಟೇಡಿಯಂನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ 2022ರ ಉದ್ಘಾಟನಾ ಸಮಾರಂಭದಲ್ಲಿ ಒಲಿಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು ಮತ್ತು ಪುರುಷರ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಭಾರತ ತಂಡ ಮುನ್ನಡೆಸಿದರು. ನೀರಜ್ ಚೋಪ್ರಾ ಉದ್ಘಾಟನಾ ಸಮಾರಂಭದಲ್ಲಿ ಧ್ವಜಧಾರಿಯಾಗಲಿದ್ದಾರೆ ಎನ್ನಲಾಗಿತ್ತು. ಆದರೆ ಗಾಯದ ಕಾರಣ ಚೋಪ್ರಾ ಕಾಮನ್‌ವೆಲ್ತ್ ಕ್ರೀಡಾಕೂಟದಿಂದ ಹೊರಬಂದಿದ್ದಾರೆ.
ಒಲಿಂಪಿಕ್ ಪದಕ ವಿಜೇತರಾದ ಪಿ.ವಿ.ಸಿಂಧು, ಮೀರಾಬಾಯಿ ಚಾನು, ಲೊವ್ಲಿನಾ ಬೊರ್ಗೊಹೈನ್, ಬಜರಂಗ್ ಪುನಿಯಾ ಮತ್ತು ರವಿ ಕುಮಾರ್ ದಹಿಯಾ ಅವರಲ್ಲದೆ ತಂಡದಲ್ಲಿ ಕೆಲವು ಪ್ರಮುಖರಿದ್ದಾರೆ. ಹಾಲಿ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್‌ಗಳಾದ ಮನಿಕಾ ಬಾತ್ರಾ ಮತ್ತು ವಿನೇಶ್ ಫೋಗಟ್ ಹಾಗೂ 2018 ರ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತರಾದ ತಜಿಂದರ್‌ಪಾಲ್ ಸಿಂಗ್ ತೂರ್, ಹಿಮಾ ದಾಸ್ ಮತ್ತು ಅಮಿತ್ ಪಂಗಲ್ ಜೊತೆಗೆ ಭಾರತವನ್ನು ಪ್ರತಿನಿಧಿಸುವ 215 ಕ್ರೀಡಾಪಟುಗಳು 19 ಕ್ರೀಡಾ ವಿಭಾಗಗಳಲ್ಲಿ 141 ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ.
ಈ ವರ್ಷ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮಹಿಳಾ T20I ಕ್ರಿಕೆಟ್ ಪಾದಾರ್ಪಣೆ ಮಾಡಲಿದೆ. ಅಗ್ರ ಎಂಟು ತಂಡಗಳು ಚಿನ್ನದ ಪದಕಕ್ಕಾಗಿ ಪೈಪೋಟಿ ನಡೆಸುತ್ತಿವೆ. ಭಾರತೀಯ ಮಹಿಳಾ ಕ್ರಿಕೆಟ್ ತಂಡ ಶುಕ್ರವಾರ ಆಸ್ಟ್ರೇಲಿಯಾ ವಿರುದ್ಧ ಚೊಚ್ಚಲ ಪಂದ್ಯವನ್ನು ಆಡಲಿದೆ. 2018ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ 66 ಪದಕಗಳನ್ನು ಗೆದ್ದುಕೊಂಡಿದೆ. 2010ರಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಅತ್ಯುತ್ತಮ ಸಾಧನೆ ಮಾಡಿತ್ತು. 2010ರಲ್ಲಿ ಭಾರತ 38 ಚಿನ್ನದ ಪದಕ ಸೇರಿದಂತೆ 101 ಪದಕಗಳನ್ನು ಗೆದ್ದಿತ್ತು.