ಕರ್ನಾಟಕ

karnataka

ETV Bharat / bharat

ಕೇರಳದ ಪ್ರಸಿದ್ಧ ಪದ್ಮನಾಭ ಸ್ವಾಮಿ ದೇವಸ್ಥಾನದ ಮೇಲೆ ಹೆಲಿಕಾಪ್ಟರ್​ ಹಾರಾಟ ನಿರ್ಬಂಧಕ್ಕೆ ಶಿಫಾರಸು

Padmanabha Swamy Temple: ಕೇರಳದ ಪ್ರಸಿದ್ಧ ಪದ್ಮನಾಭ ಸ್ವಾಮಿ ದೇವಸ್ಥಾನದ ಮೇಲೆ ಖಾಸಗಿ ಹೆಲಿಕಾಪ್ಟರ್​ ಹಾರಾಟ ಮಾಡಿದ ಘಟನೆ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್​ಗಳ ಹಾರಾಟಕ್ಕೆ ಸಂರ್ಪೂಣ ನಿರ್ಬಂಧ ಹೇರಬೇಕೆಂದು ಪೊಲೀಸರು ಶಿಫಾರಸು ಮಾಡಿದ್ದಾರೆ.

put ban for helicopters over sree padmanabha-swamy-temple-kerala-police
ಕೇರಳದ ಪ್ರಸಿದ್ಧ ಪದ್ಮನಾಭ ಸ್ವಾಮಿ ದೇವಸ್ಥಾನದ ಮೇಲೆ ಹೆಲಿಕಾಪ್ಟರ್​ ಹಾರಾಟ ನಿರ್ಬಂಧಕ್ಕೆ ಶಿಫಾರಸು

By

Published : Aug 5, 2023, 6:12 PM IST

ತಿರುವನಂತಪುರಂ (ಕೇರಳ):ವಿಶ್ವದ ಶ್ರೀಮಂತ ದೇವಾಲಯವಾದ ಕೇರಳದ ತಿರುವನಂತಪುರಂನ ಪದ್ಮನಾಭ ಸ್ವಾಮಿ ದೇವಸ್ಥಾನದ ಮೇಲೆ ಖಾಸಗಿ ಹೆಲಿಕಾಪ್ಟರ್​ವೊಂದು ಹಾರಾಟ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಜುಲೈ 28ರಂದು ದೇಗುಲದ ಮೇಲೆ ಐದು ಬಾರಿ ಹೆಲಿಕಾಪ್ಟರ್​ ಸುತ್ತು ಹಾಕಿದ್ದು, ಇದು ಸಾಕಷ್ಟು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ಅನಧಿಕೃತ ಖಾಸಗಿ ಹೆಲಿಕಾಪ್ಟರ್​ ದೇವಸ್ಥಾನದ ಮೇಲೆ ಹಾರಾಟ ಮಾಡಿದ್ದು, ಭದ್ರತಾ ಲೋಪ ಎಂದು ಹಿಂದೂ ಸಂಘಟನೆಗಳು ಹಾಗೂ ದೇವಾಲಯದ ಆಡಳಿತ ಮಂಡಳಿ ಆರೋಪಿಸಿದೆ. ಈ ಕುರಿತು ತನಿಖೆ ನಡೆಸಲು ಕೇಂದ್ರೀಯ ಸಂಸ್ಥೆಗೆ ವಹಿಸಬೇಕೆಂದು ಆಡಳಿತ ಮಂಡಳಿ ಸದಸ್ಯ ಕುಮ್ಮನಂ ರಾಜಶೇಖರನ್​ ಒತ್ತಾಯಿಸಿದ್ದಾರೆ.

ನಡೆದಿದ್ದೇನು?:ಪದ್ಮನಾಭ ಸ್ವಾಮಿ ದೇವಸ್ಥಾನದ ಮೇಲೆ ಜುಲೈ 28ರಂದು ರಾತ್ರಿ 7 ಗಂಟೆ ಸುಮಾರಿಗೆ ಖಾಸಗಿ ಹೆಲಿಕಾಪ್ಟರ್​ ಐದು ಬಾರಿ ಹಾರಾಟ ಮಾಡಿದೆ. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ನಗರ ಪೊಲೀಸ್​ ಆಯುಕ್ತ ಸಿಹೆಚ್​​ ನಾಗರಾಜು ಮತ್ತು ತಂಡ ತನಿಖೆ ಕೈಗೊಂಡಿದೆ.

ಇದರ ಭಾಗವಾಗಿ ತಿರುವನಂತಪುರಂ ವಿಮಾನ ನಿಲ್ದಾಣದ ಏರ್​ ಟ್ರಾಫಿಕ್​ ಕಂಟ್ರೋಲ್​ ವಿಭಾಗ ದಕ್ಷಿಣ ವಾಯು ಪಡೆಯ ಕಮಾಂಡ್​ ಕಚೇರಿಯನ್ನು ಪೊಲೀಸರು ಸಂಪರ್ಕಿಸಿದ್ದಾರೆ. ಆಗ ದೇವಸ್ಥಾನದ ಮೇಲೆ ಹಾರಾಟ ಮಾಡಿದ ಹೆಲಿಕಾಪ್ಟರ್​ ಖಾಸಗಿ ವಿಮಾನಯಾನ ಕಂಪನಿಗೆ ಸೇರಿದೆ ಎಂಬುದು ಗೊತ್ತಾಗಿದೆ.

ಪದ್ಮನಾಭ ಸ್ವಾಮಿ ದೇವಸ್ಥಾನದ ಮೇಲೆ ವಿಮಾನಗಳು ಹಾಗೂ ಹೆಲಿಕಾಪ್ಟರ್​ಗಳ ಹಾರಾಟಕ್ಕೆ ಯಾವುದೇ ನಿರ್ಬಂಧವಿಲ್ಲ. ಡ್ರೋನ್​ಗಳಿಗೆ ಮಾತ್ರ ನಿಷೇಧ ಹೇರಲಾಗಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ನಿಯಮಗಳ ಆಧಾರದ ಮೇಲೆ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಹೆಲಿಕಾಪ್ಟರ್​ ಹಾರಾಟ ನಿರ್ಬಂಧಕ್ಕೆ ಶಿಫಾರಸು: ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲು ದೇವಸ್ಥಾನದ ಮೇಲೆ ಹೆಲಿಕಾಪ್ಟರ್​ಗಳ ಹಾರಾಟಕ್ಕೆ ಸಂರ್ಪೂಣ ನಿರ್ಬಂಧ ಹೇರಬೇಕೆಂದು ಪೊಲೀಸ್​ ಆಯುಕ್ತರು ಶಿಫಾರಸು ಮಾಡಿದ್ದಾರೆ. ಈ ಶಿಫಾರಸನ್ನು ರಾಜ್ಯ ಸರ್ಕಾರದ ಮೂಲಕ ನಾಗರಿಕ ವಿಮಾನಯಾನ ಮಹಾನಿರ್ದೇಶಕರಿಗೆ (ಡಿಜಿಸಿಎ) ಸಲ್ಲಿಸಲು ತೀರ್ಮಾನಿಸಲಾಗಿದೆ.

ಇದೇ ವೇಳೆ, ಪದ್ಮನಾಭ ಸ್ವಾಮಿ ದೇವಸ್ಥಾನವು ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪವಿದೆ. ಹೀಗಾಗಿ ವಿಮಾನಗಳ ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ಡಿಜಿಸಿಎ ಹೇಳಿದೆ. ಆದರೆ, ಹಾಲಿಕಾಪ್ಟರ್​ಗಳ ನಿರ್ಬಂಧಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಡಿಜಿಸಿಎ ಸ್ಪಷ್ಟಪಡಿಸಿದೆ. ಇದರ ಆಧಾರದ ಮೇಲೆ ಪೊಲೀಸ್ ಆಯುಕ್ತರು ಸರ್ಕಾರಕ್ಕೆ ಶಿಫಾರಸು ಸಲ್ಲಿಸಿದ್ದಾರೆ.

ಪದ್ಮನಾಭ ಸ್ವಾಮಿ ದೇವಸ್ಥಾನವನ್ನು ವಿಶ್ವದ ಅತ್ಯಂತ ಶ್ರೀಮಂತ ದೇವಾಲಯವೆಂದು ಪರಿಗಣಿಸಲಾಗಿದೆ. ದೇವಸ್ಥಾನ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಸುಪ್ರೀಂ ಕೋರ್ಟ್​ ಹೈಸೆಕ್ಯುರಿಟಿ ವಲಯ ಎಂದು ಘೋಷಿಸಿದೆ. ಜೊತೆಗೆ ದೇವಸ್ಥಾನದ ಚಟುವಟಿಕೆಗಳನ್ನು ಸುಪ್ರೀಂ ಮೇಲ್ವಿಚಾರಣೆ ಮಾಡುತ್ತಿದೆ. ದೇವಸ್ಥಾನದ ಭದ್ರತೆಗಾಗಿ 200ಕ್ಕೂ ಹೆಚ್ಚು ಪೊಲೀಸ್ ಹಾಗೂ ಅರೆಸೇನಾ ಪಡೆಗಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ:ಶ್ರೀ ಪದ್ಮನಾಭ ಸ್ವಾಮಿ ದೇವಾಲಯದಲ್ಲಿ ವಿಸ್ಮಯ.. ಗೋಪುರದ ಕಿಂಡಿಗಳ ಮೂಲಕ ಹಾದು ಹೋಗುವ ಸೂರ್ಯ

ABOUT THE AUTHOR

...view details