ಜಗದಲ್‌ಪುರ (ಛತ್ತೀಸ್‌ಗಢ):ಜಾತಿ ಪದ್ಧತಿಯನ್ನು ಟೀಕಿಸಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ನೀಡಿದ ಹೇಳಿಕೆಗೆ ಪುರಿಯ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಅಸಮಾಧಾನ ವ್ಯಕ್ತಪಡಿಸಿದರು. "ಭಾಗವತರಿಗೆ ಶಾಸ್ತ್ರಗಳ ಜ್ಞಾನದ ಕೊರತೆಯಿದೆ. ಅದಕ್ಕಾಗಿಯೇ ಅವರು ಇಂತಹ ಹೇಳಿಕೆಗಳನ್ನು ನೀಡಿದ್ದಾರೆ. ಅವರು ಮೊದಲು ಈ ಬಗ್ಗೆ ತಿಳಿದುಕೊಳ್ಳಲಿ" ಎಂದು ಹೇಳಿದರು.
ಆರ್‌ಎಸ್‌ಎಸ್ ಮುಖ್ಯಸ್ಥರನ್ನು ತರಾಟೆಗೆ ತೆಗೆದುಕೊಂಡ ಸರಸ್ವತಿ ಶ್ರೀಗಳು, ಆರ್‌ಎಸ್‌ಎಸ್ ಮುಖ್ಯಸ್ಥರು ಬ್ರಾಹ್ಮಣ ಸಮುದಾಯದ ತಂದೆ-ತಾಯಿಯಿಂದ ಹುಟ್ಟಿದವರು. ಈಗ ಅವರು ತಮ್ಮ ಹೆತ್ತವರನ್ನೇ ನಿಂದಿಸುತ್ತಿದ್ದಾರೆ? ಅವರನ್ನು ಮೋಹನ್ ಭಾಗವತ್ ಬದಲಾಗಿ 'ಮೋದಿ ಭಾಗವತ್' ಎಂದು ಕರೆಯಬೇಕಾಗಿದೆ ಎಂದು ಟೀಕಿಸಿದರು.
ಪ್ರಧಾನಿ ಮೋದಿ ಬಗ್ಗೆಯೂ ಬೇಸರ:ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿರುವ ಪುರಿ ಶ್ರೀಗಳು, ಪ್ರಧಾನಿಗಳು ರಾಜತಾಂತ್ರಿಕತೆಯಲ್ಲಿ ನಿಪುಣರಾಗಿದ್ದಾರೆ. ಆದರೆ, ಹಿಂದುಗಳ ಪರವಾಗಿಲ್ಲ ಎಂಬುದು ನನ್ನ ಅಭಿಪ್ರಾಯ. ಅಕ್ರಮ ಮತಾಂತರದ ವಿರುದ್ಧ ಅವರು ಕಠಿಣ ಕ್ರಮ ಕೈಗೊಂಡ ದಿನ ಅವರನ್ನು ನಾನು ಹಿಂದುಗಳ ಪರ ಎಂದು ಪರಿಗಣಿಸುತ್ತೇನೆ. ಮುಂದಿನ ಸಲವೂ ಪ್ರಧಾನಿಯಾಗಬಹುದೇ ಅಥವಾ ಇಲ್ಲವೇ ಎಂಬುದನ್ನು ತಿಳಿಯಲು ಅವರು ನನ್ನನ್ನು ಭೇಟಿಯಾದಾಗ ಅವರ ಕಿವಿಯಲ್ಲೇ ಹೇಳುವೆ ಎಂದು ಹೇಳಿದರು.
ಶರ್ಮಾ, ಯೋಗಿ ಆದಿತ್ಯನಾಥ್ಗೆ ಮೆಚ್ಚುಗೆ:ಇನ್ನೊಂದೆಡೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಅಸ್ಸೋಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರನ್ನು ಪುರಿ ಶ್ರೀಗಳು ಶ್ಲಾಘಿಸಿದ್ದಾರೆ. "ಇಬ್ಬರಿಗೂ ಶಿಸ್ತು ಮತ್ತು ಅನೇಕ ಗುಣಗಳು ಒಂದಾಗಿವೆ. ಆಡಳಿತ ಮಾಡುವ ಸಾಮರ್ಥ್ಯ ಅವರಿಗಿದೆ. ಅವರು ಹಿಂದೂಗಳಿಗೆ ಅನ್ಯಾಯ ಮಾಡುವುದಿಲ್ಲ. ಅದನ್ನು ಮಾಡಲೂ ಬಿಡುವುದಿಲ್ಲ ಎಂದು ಹೊಗಳಿದ್ದಾರೆ.