ತೇಜ್ಪುರ್:ಮುಸುಕು ದಾರಿ ದರೋಡೆ ಕೋರರ ಗುಂಪೊಂದು ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ನುಗ್ಗಿ ಹಣ ದೋಚಿ ಪರಾರಿಯಾಗಿರುವ ಘಟನೆ ಮಣಿಪುರದ ಉಖ್ರುಲ್ ಜಿಲ್ಲೆಯಲ್ಲಿ ಗುರುವಾರ ಸಂಜೆ ನಡೆದಿದ್ದು, ಇಂದು ಬೆಳಕಿಗೆ ಬಂದಿದೆ. ಮುಖವಾಡ ಧರಿಸಿದ್ದ ದುಷ್ಕರ್ಮಿಗಳು ಶಸ್ತ್ರಸಜ್ಜಿತವಾಗಿ ಬ್ಯಾಂಕ್‌ಗೆ ನುಗ್ಗಿ ಬರೋಬ್ಬರಿ 18.85 ಕೋಟಿ ರೂಪಾಯಿ ಲೂಟಿ ಮಾಡಿದ್ದಾರೆ ಎಂದು ವರದಿಯಾಗಿದೆ. ಬ್ಯಾಂಕ್ ಹೊರಗೆ ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿ ದರೋಡೆ ಕೋರರ ಗುಂಪು ಬ್ಯಾಂಕ್ ಒಳಗೆ ಪ್ರವೇಶಿಸುತ್ತಿರುವ ವಿಡಿಯೋ ಸೆರೆಯಾಗಿದೆ. ಇಂದು ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ 10 ಜನರ ಅಪರಿಚಿತ ಮುಸುಕುಧಾರಿಗಳ ಗುಂಪು ಗುರುವಾರ (ನಿನ್ನೆ) ಸಂಜೆ 5.40ಕ್ಕೆ ಉಖ್ರುಲ್‌ನ ವ್ಯೂಲ್ಯಾಂಡ್ ಪ್ರದೇಶದಲ್ಲಿನ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ನುಗ್ಗಿದ್ದಾರೆ. ಮುಖಕ್ಕೆ ಮಾಸ್ಕ್ ಧರಿಸಿದ್ದ ದುಷ್ಕರ್ಮಿಗಳು ಬೇರೊಂದು ಭಾಷೆಯಲ್ಲಿ ಮಾತನಾಡುತ್ತಿದ್ದರು. ಈ ವೇಳೆ, ಕೆಲ ದುಷ್ಕರ್ಮಿಗಳ ಏಕಾಏಕಿ ತಮ್ಮ ಬಳಿಯಿದ್ದ ಬಂದೂಕುಗಳನ್ನು ತೋರಿಸಿ ನೌಕರರನ್ನು ಎಲ್ಲಿಯೂ ಕದಲದಂತೆ ತಡೆದಿದ್ದಾರೆ, ಉಳಿದ ದರೋಡೆಕೋರರು ನಗದು ಸಂಗ್ರಹಿಸುತ್ತಿದ್ದರು ಎಂದು ಬ್ಯಾಂಕ್ ಸಿಬ್ಬಂದಿ ಪೊಲೀಸರಿಗೆ ತಿಳಿಸಿದ್ದಾರೆ.