ಫರೀದ್ಕೋಟ್(ಪಂಜಾಬ್):ರೋಗಿಗಳು ಮಲಗುವ ಕೊಳಕಾಗಿದ್ದ ಬೆಡ್ ಮೇಲೆ ತಮ್ಮನ್ನು ಪಂಜಾಬ್ ಆರೋಗ್ಯ ಸಚಿವರು ಮಲಗಿಸಿದ್ದಕ್ಕೆ ಸಿಟ್ಟಾದ ಬಾಬಾ ಫರೀದ್ ವೈದ್ಯಕೀಯ ವಿಶ್ವವಿದ್ಯಾಲಯದ ಕುಲಪತಿ ಡಾ.ರಾಜ್ ಬಹದ್ದೂರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆರೋಗ್ಯ ಸಚಿವರ ವರ್ತನೆಯಿಂದ ಬೇಸತ್ತು ತಾವು ಈ ರೀತಿ ಮಾಡಿದ್ದಾಗಿ ಅವರು ಮುಖ್ಯಮಂತ್ರಿಗೆ ಮಾಹಿತಿ ನೀಡಿದ್ದಾರೆ.
ಏನಾಯ್ತು?:ಪಂಜಾಬ್ ಆರೋಗ್ಯ ಸಚಿವ ಚೇತನ್ ಸಿಂಗ್ ಅವರು ಬಾಬಾ ಫರೀದ್ ವೈದ್ಯಕೀಯ ವಿಶ್ವವಿದ್ಯಾಲಯದ ಗುರು ಗೋವಿಂದ್ ಸಿಂಗ್ ವೈದ್ಯಕೀಯ ಕಾಲೇಜಿಗೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ, ಚರ್ಮ ರೋಗದ ವಾರ್ಡ್ನಲ್ಲಿನ ಅವ್ಯವಸ್ಥೆ ಕಂಡು ಕೆಂಡವಾದರು. ವಾರ್ಡ್ನ ಬೆಡ್ಗಳ ಅಸ್ವಚ್ಚತೆಯ ಬಗ್ಗೆ ಕುಲಪತಿಯ ಬಳಿ ಪ್ರಶ್ನಿಸಿದ್ದಾರೆ.
ಇದಕ್ಕೆ ಕುಲಪತಿಗಳು, ಅನುದಾನದ ಕೊರತೆಯಿಂದಾಗಿ ನಿರ್ವಹಣೆ ಮಾಡುವುದು ಕಷ್ಟವಾಗಿದೆ. ಹೀಗಾಗಿ ಬೆಡ್ಗಳು ವ್ಯವಸ್ಥಿತವಾಗಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ. ಇದರಿಂದ ಮತ್ತೂ ಕೆರಳಿದ ಆರೋಗ್ಯ ಸಚಿವ, ಇದು ಚರ್ಮ ರೋಗದ ವಿಭಾಗ. ಇಲ್ಲಿ ಬಳಸುವ ಬೆಡ್ಗಳು ಎಷ್ಟು ಸ್ವಚ್ಛವಾಗಿಡಬೇಕು ಎಂಬುದೇ ಗೊತ್ತಿಲ್ಲವೇ?. ನೀವು ಆ ಬೆಡ್ ಮೇಲೆ ಮಲಗಿ ಗೊತ್ತಾಗುತ್ತದೆ ಎಂದು ಹೇಳಿದರು.