ಚಂಡೀಗಢ(ಪಂಜಾಬ್):ಪ್ರಮುಖ ನಿರ್ಧಾರವೊಂದರಲ್ಲಿ ಮುಖ್ಯಮಂತ್ರಿ ಭಗವಂತ್ ಮಾನ್ ನೇತೃತ್ವದ ಪಂಜಾಬ್ ಸರ್ಕಾರವು ಮತ್ತೊಂದು ಮಹತ್ವದ ಆದೇಶ ಹೊರಡಿಸುವ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ರಾಜ್ಯದಲ್ಲಿನ 424 ಮಂದಿಗೆ ಒದಗಿಸಿದ್ದ ಭದ್ರತೆಯನ್ನು ಹಿಂತೆಗೆದುಕೊಂಡಿದೆ. ಭದ್ರತೆಯನ್ನು ಹಿಂತೆಗೆದುಕೊಂಡವರಲ್ಲಿ ಅನೇಕ ನಿವೃತ್ತ ಪೊಲೀಸ್ ಅಧಿಕಾರಿಗಳು, ಧಾರ್ಮಿಕ ಮುಖಂಡರು ಮತ್ತು ರಾಜಕೀಯ ವ್ಯಕ್ತಿಗಳು ಸೇರಿದ್ದಾರೆ.
424 ಜನರ ಭದ್ರತೆ ಹಿಂಪಡೆದ ಪಂಜಾಬ್ ಸರ್ಕಾರ.. ಸಿಎಂ ಭಗವಂತ್ ಮಾನ್ ಮಹತ್ವದ ತೀರ್ಮಾನ - ಭದ್ರತೆ ಹಿಂತೆಗೆದುಕೊಂಡ ಪಂಜಾಬ್ ಸರ್ಕಾರ
ಭಗವಂತ್ ಮಾನ್ ಅವರ ಪಂಜಾಬ್ ಸರ್ಕಾರವು ತಕ್ಷಣವೇ ಜಾರಿಗೆ ಬರುವಂತೆ 424 ಜನರ ಭದ್ರತೆಯನ್ನು ಹಿಂಪಡೆದಿದೆ. ಅಲ್ಲದೇ ಸಂಬಂಧಪಟ್ಟ ಪೊಲೀಸ್ ಸಿಬ್ಬಂದಿಗೆ ಇಂದು ಜಲಂಧರ್ ಕ್ಯಾಂಟ್‌ನಲ್ಲಿರುವ ವಿಶೇಷ ಡಿಜಿಪಿಗೆ ವರದಿ ಮಾಡಲು ಸೂಚಿಸಲಾಗಿದೆ.
![424 ಜನರ ಭದ್ರತೆ ಹಿಂಪಡೆದ ಪಂಜಾಬ್ ಸರ್ಕಾರ.. ಸಿಎಂ ಭಗವಂತ್ ಮಾನ್ ಮಹತ್ವದ ತೀರ್ಮಾನ Punjab govt withdraws security cover provided to 424 people](https://etvbharatimages.akamaized.net/etvbharat/prod-images/768-512-15407605-862-15407605-1653716381960.jpg)
ಏಪ್ರಿಲ್‌ನಲ್ಲಿ ಮಾಜಿ ಸಚಿವರು, ಮಾಜಿ ಶಾಸಕರು ಮತ್ತು ಇತರ ನಾಯಕರು ಸೇರಿದಂತೆ 184 ಜನರ ಭದ್ರತೆಯನ್ನು ಹಿಂತೆಗೆದುಕೊಳ್ಳುವಂತೆ ಪಂಜಾಬ್ ಸರ್ಕಾರ ಆದೇಶ ನೀಡಿತ್ತು. ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ, ಕ್ಯಾಪ್ಟನ್ ಅಮರಿಂದರ್ ಸಿಂಗ್, ಅವರ ಪುತ್ರ ರಣೀಂದರ್ ಸಿಂಗ್, ಕಾಂಗ್ರೆಸ್ ಶಾಸಕ ಪರತಾಪ್ ಸಿಂಗ್ ಬಜ್ವಾವೆರೆ, ಅವರ ಪತ್ನಿ ಹಾಗೂ ಅವರ ಕುಟುಂಬಕ್ಕೆ ಒದಗಿಸಲಾಗಿದ್ದ ಭದ್ರತೆಯನ್ನು ಕಳೆದ ತಿಂಗಳು ಹಿಂಪಡೆಯಲಾಗಿತ್ತು. ಇದೀಗ ಮತ್ತೆ 424 ಜನರಿಗೆ ಒದಗಿಸಿದ್ದ ಭದ್ರತೆಯನ್ನು ಹಿಂತೆಗೆದುಕೊಂಡಿದೆ.
ಇತ್ತೀಚೆಗೆ ಸರ್ಕಾರದ ಕಾಮಗಾರಿಗಳ ಗುತ್ತಿಗೆಯಲ್ಲಿ ಒಂದು ಪರ್ಸೆಂಟ್ ಕಮಿಷನ್ ಪಡೆದಿದ್ದ ಆರೋಗ್ಯ ಸಚಿವರನ್ನೇ ಸಂಪುಟದಿಂದ ಕಿತ್ತು ಹಾಕಿ, ಅವರನ್ನು ಬಂಧಿಸುವಂತೆ ಆದೇಶ ಹೊರಡಿಸಲಾಗಿತ್ತು. ಈ ಮೂಲಕ ಪಂಜಾಬ್‌ನ ಆಪ್ ಸರ್ಕಾರ ಹಾಗೂ ಮುಖ್ಯಮಂತ್ರಿ ಭಗವಂತ್ ಮಾನ್ ತೀರ್ಮಾನ ದೇಶದ ಗಮನ ಸೆಳೆದಿತ್ತು. ಇದೀಗ ಕೈಗೊಂಡಿರುವ ನಿರ್ಧಾರದಿಂದ ಸರ್ಕಾರದ ಬೊಕ್ಕಸಕ್ಕೆ ಆಗುತ್ತಿದ್ದ ನಷ್ಟವನ್ನು ಸಿಎಂ ಮಾನ್ ತಪ್ಪಿಸಿದಂತಾಗಿದೆ.