ಚಂಡಿಗಢ (ಪಂಜಾಬ್): ವೈದ್ಯಕೀಯ ಕಾರಣ ಹೊರತುಪಡಿಸಿ ಇತರೆ ಯಾವುದೇ ಕಾರಣಕ್ಕೂ ಕೋವಿಡ್ ಲಸಿಕೆಯ(COVID Vaccine) ಮೊದಲ ಡೋಸ್ ತೆಗೆದುಕೊಳ್ಳಲು ರಾಜ್ಯ ಸರ್ಕಾರಿ ನೌಕರರು ವಿಫಲರಾದರೆ ಸೆಪ್ಟೆಂಬರ್ 15 ರ ನಂತರ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲಾಗುವುದು ಎಂದು ಪಂಜಾಬ್ ಸಿಎಂ ಕ್ಯಾ.ಅಮರಿಂದರ್ ಸಿಂಗ್ ಹೇಳಿದ್ದಾರೆ.
ರಾಜ್ಯದ ಜನರನ್ನು ಕಾಯಿಲೆಯಿಂದ ರಕ್ಷಿಸಲು ಮತ್ತು ಲಸಿಕೆ ಹಾಕಿಸಿಕೊಂಡವರು ಭಯ ಪಡಬೇಕಿಲ್ಲ ಎಂದು ಖಚಿತಪಡಿಸಿಕೊಳ್ಳಲು ಈ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಶುಕ್ರವಾರ ನಡೆದ ಉನ್ನತ ಮಟ್ಟದ ವರ್ಚುವಲ್ ಕೋವಿಡ್ ಪರಿಶೀಲನಾ ಸಭೆಯಲ್ಲಿ, ವಿಶ್ಲೇಷಿಸಿದ ದತ್ತಾಂಶದಿಂದ ಲಸಿಕೆಯ ಪರಿಣಾಮಕಾರಿತ್ವವು ಸ್ಪಷ್ಟವಾಗಿದೆ ಎಂದು ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹೇಳಿದ್ದಾರೆ.
ಸರ್ಕಾರಿ ಉದ್ಯೋಗಿಗಳಿಗೆ ವ್ಯಾಕ್ಸಿನ್ ಹಾಕಲು ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಅನ್ನೋದರ ಬಗ್ಗೆಯೂ ಚರ್ಚಿಸಲಾಯಿತು. ಈ ವೇಳೆ ಮೊದಲ ಡೋಸ್ ವ್ಯಾಕ್ಸಿನ್ ಪಡೆಯದವರು, ಲಸಿಕೆ ಪಡೆಯುವವರೆಗೆ ರಜೆಯಲ್ಲಿರುವಂತೆ ಸೂಚಿಸುವ ನಿರ್ಧಾರ ಕೈಗೊಂಡಿದ್ದಾರೆ.
ಒಂದು ತಿಂಗಳ ಹಿಂದೆ ಶಾಲಾ ಶಿಕ್ಷಕರಿಗೆ ವಾರಕ್ಕೊಮ್ಮೆ RT-PCR ಪರೀಕ್ಷೆ ಮಾಡಿಸುವಂತೆ ಹಾಗೂ ಒಂದು ಡೋಸ್ ವ್ಯಾಕ್ಸಿನ್ ಪಡೆದ ಬೋಧಕ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಲು ರಾಜ್ಯ ಸರ್ಕಾರ ಆದೇಶಿಸಿತ್ತು. ಇತರೆ ರೋಗಗಳಿಂದ ಬಳಲುತ್ತಿರುವವರು ವ್ಯಾಕ್ಸಿನ್ ಹಾಕಿಸಿಕೊಂಡ ನಂತರವೇ ಕರ್ತವ್ಯಕ್ಕೆ ಹಾಜರಾಗಬೇಕೆಂದು ಸೂಚಿಸಲಾಗಿತ್ತು.
ಇದನ್ನೂ ಓದಿ: ಪಂಜಾಬ್ : ಕೊರೊನಾ ನಿಯಂತ್ರಣಕ್ಕೆ ಸೆ. 30 ರವರೆಗೆ ನಿರ್ಬಂಧ ವಿಸ್ತರಣೆ
ರಾಜ್ಯವು ಈಗಾಗಲೇ ಶೇಕಡಾ 57 ಕ್ಕಿಂತ ಹೆಚ್ಚು ಜನರಿಗೆ ಲಸಿಕೆ ಹಾಕಿದೆ. ಮೊದಲ ಡೋಸ್ ಅನ್ನು 1.18 ಕೋಟಿ ಮತ್ತು ಎರಡನೆ ಡೋಸ್ಅನ್ನು 37.81 ಲಕ್ಷ ಜನರಿಗೆ ನೀಡಲಾಗಿದೆ. ಆದರೂ, ವ್ಯಾಕ್ಸಿನೇಷನ್ಅನ್ನು ಮತ್ತಷ್ಟು ತೀವ್ರಗೊಳಿಸುವಂತೆ ಸಿಎಂ ಕ್ಯಾ. ಅಮರಿಂದರ್ ಸಿಂಗ್ ಆದೇಶಿಸಿದ್ದಾರೆ. ಇದೇ ವೇಳೆ ಅವರು, ರಾಜ್ಯಕ್ಕೆ ಕೇಂದ್ರದಿಂದ ಸರಬರಾಜು ಮಾಡಿದ ಲಸಿಕೆಗಳನ್ನು ವ್ಯರ್ಥವಾಗದಂತೆ ಬಳಸಿಕೊಳ್ಳಲಾಗಿದೆ ಎಂದು ಸ್ಪಪ್ಟಪಡಿಸಿದ್ದಾರೆ.