ಚಂಡೀಗಢ (ಪಂಜಾಬ್): ಮಕ್ಕಳು ತಮ್ಮದೇ ಆಸೆ-ಆಕಾಂಕ್ಷೆಗಳನ್ನು ಹೊಂದಿರುತ್ತಾರೆ. ಒಬ್ಬರಿಗೆ ದೂರದ ಪ್ರಯಾಣ ಮಾಡಬೇಕು. ಮತ್ತೊಬ್ಬರಿಗೆ ವಿದೇಶಕ್ಕೆ ಹೋಗಬೇಕು ಮತ್ತು ಇನ್ನೊಬ್ಬರಿಗೆ ವಿಮಾನದಲ್ಲಿ ಸಂಚಾರ ಮಾಡಬೇಕು... ಹೀಗೆ ವಿವಿಧ ರೀತಿಯಲ್ಲಿ ಆಸೆಗಳು ಮಕ್ಕಳಲ್ಲಿ ಇರುತ್ತವೆ. ಇಂತಹದ್ದೆ ಆಸೆಗಳನ್ನು ಹೊಂದಿದ್ದ ನಾಲ್ವರು ವಿದ್ಯಾರ್ಥಿಗಳ ಇಚ್ಛೆ ಈಡೇರಿಸಲು ಸರ್ಕಾರಿ ಶಾಲೆಯ ಪ್ರಾಂಶುಪಾಲರೊಬ್ಬರು ಮುಂದಾಗಿದ್ದು, ಈಗಾಗಲೇ ಇಬ್ಬರ ಆಸೆಯನ್ನು ಪೂರೈಸಿದ್ದಾರೆ.
ಹೌದು, ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯ ಸರ್ಕಾರಿ ಶಾಲೆಯ ಪ್ರಾಂಶುಪಾಲ ರಾಕೇಶ್ ಶರ್ಮಾ ಎಂಬುವವರೇ ವಿದ್ಯಾರ್ಥಿಗಳ ಆಸೆ ಈಡೇರಿಸಿ ಮಾದರಿಯಾಗಿದ್ದಾರೆ. ಇಲ್ಲಿನ ಜೀರಾ - ಶಹೀದ್ ಗುರುದಾಸ್ ರಾಮ್ ಮೆಮೋರಿಯಲ್ ಪ್ರೌಢ ಶಾಲೆಯ (ಬಾಲಕಿಯರ) ಪ್ರಾಂಶುಪಾಲರಾದ ರಾಕೇಶ್ ಶರ್ಮಾ ತಮ್ಮ ಜೇಬಿನಿಂದ ವಿದ್ಯಾರ್ಥಿನಿಯರ ವಿಮಾನ ಪ್ರಯಾಣದ ವೆಚ್ಚವನ್ನು ಭರಿಸುತ್ತಿದ್ದಾರೆ. ಇದರೊಂದಿಗೆ ಶಾಲೆಯ ಕೀರ್ತಿಯನ್ನೂ ಸಹ ಹೆಚ್ಚಿಸುವಲ್ಲಿ ಪ್ರಾಂಶುಪಾಲರು ಯಶಸ್ವಿಯಾಗಿದ್ದಾರೆ.
ವಿದ್ಯಾರ್ಥಿನಿಯರನ್ನು ಪ್ರೇರೇಪಿಸಲು ಆಸೆ ಈಡೇರಿಕೆಯ ಭರವಸೆ: 10ನೇ ಮತ್ತು 12ನೇ ತರಗತಿಯ ಪರೀಕ್ಷೆಯಲ್ಲಿ ತಮ್ಮ ಶಾಲೆಯ ವಿದ್ಯಾರ್ಥಿಗಳು ಮೆರಿಟ್ನಲ್ಲಿ ಉತ್ತೀರ್ಣರಾಗಬೇಕೆಂದು ರಾಕೇಶ್ ಶರ್ಮಾ ಬಯಸುತ್ತಿದ್ದರು. ಹೀಗಾಗಿಯೇ ಓದಿನಲ್ಲಿ ವಿದ್ಯಾರ್ಥಿನಿಯರನ್ನು ಪ್ರೇರೇಪಿಸುವ ಯತ್ನಿಸುತ್ತಿದ್ದರು. ಇದರ ನಡುವೆ ತಮ್ಮ ಶಾಲೆಯಲ್ಲಿ ಓದಿನಲ್ಲಿ ಸ್ವಲ್ಪ ಮುಂದೆ ಹಾಗೂ ಅವರ ಆಕಾಂಕ್ಷೆಗಳನ್ನು ಅರಿತುಕೊಳ್ಳುವ ತೀರ್ಮಾನಕ್ಕೆ ಪ್ರಾಂಶುಪಾಲರು ಬಂದಿದ್ದರು.
ರಾಕೇಶ್ ಶರ್ಮಾ ಅವರ ಪ್ರಕಾರ, ಶಾಲೆಯ 10ನೇ ಮತ್ತು 12ನೇ ತರಗತಿಯ ವಿದ್ಯಾರ್ಥಿನಿಯರು ಕಳೆದ 12 ವರ್ಷಗಳಿಂದ ಪಂಜಾಬ್ ಶಾಲಾ ಶಿಕ್ಷಣ ಮಂಡಳಿಯ ನಡೆಸುವ ಪರೀಕ್ಷೆಯಲ್ಲಿ ಮೆರಿಟ್ ಪಟ್ಟಿಯಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ. ಆದ್ದರಿಂದ ವಿದ್ಯಾರ್ಥಿನಿಯರನ್ನು ಅಧ್ಯಯನದಲ್ಲಿ ಕಷ್ಟಪಟ್ಟು ತೊಡಗಿಸುವ ಮತ್ತು ಅವರನ್ನು ಪ್ರೇರೇಪಿಸುವ ಸಲುವಾಗಿ ಅವರ ಆಸೆಗಳ ಬಗ್ಗೆ ತಿಳಿದುಕೊಂಡಿದೆ. ನಂತರ ಮೆರಿಟ್ ಪಟ್ಟಿಯಲ್ಲಿ ಸ್ಥಾನ ಪಡೆದರೆ ಖಂಡಿತವಾಗಿಯೂ ನಿಮ್ಮ ಆಸೆಯನ್ನು ಪೂರೈಸುತ್ತೇನೆ ಎಂದು ವಿದ್ಯಾರ್ಥಿನಿಯರಿಗೆ ಭರವಸೆ ಕೊಟ್ಟಿದ್ದೆ ಎಂದು ತಿಳಿಸಿದ್ದಾರೆ.
ವಿಮಾನ ಪ್ರಯಾಣದ ಇಚ್ಛೆ ವ್ಯಕ್ತಪಡಿದ್ದ ವಿದ್ಯಾರ್ಥಿನಿಯರು: 10ನೇ ಮತ್ತು 12ನೇ ತರಗತಿಯ ಯಾವುದೇ ವಿದ್ಯಾರ್ಥಿನಿ ಬೋರ್ಡ್ ಪರೀಕ್ಷೆಗಳ ಮೆರಿಟ್ ಪಟ್ಟಿಯಲ್ಲಿ ಹೆಸರು ಪಡೆದರೆ, ತಮ್ಮ ಆಯ್ಕೆಯ ಯಾವುದೇ ಪ್ರವಾಸಿ ಸ್ಥಳಕ್ಕೆ ವಿಮಾನ ಪ್ರಯಾಣದ ವೆಚ್ಚವನ್ನು ನಾನೇ ಭರಿಸುತ್ತೇನೆ ಎಂದು ಪ್ರಾರ್ಥನಾ ಸಭೆಯಲ್ಲಿ ಘೋಷಿಸಿದ್ದೆ. ಆಗ ಕೆಲವು ವಿದ್ಯಾರ್ಥಿನಿಯರು ವಿಮಾನ ಪ್ರಯಾಣ ಬಗ್ಗೆ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ನಾನು ಅವರ ಆಸೆಯನ್ನು ಪೂರೈಸಲು ಸಿದ್ಧನಿದ್ದೇನೆ ಎಂದು ಹೇಳಿದ್ದೆ ಎಂದು ಪ್ರಾಂಶುಪಾಲರು ಮಾಹಿತಿ ನೀಡಿದ್ದರು.
ಶಾಲೆಯ ಹೆಚ್ಚಿನ ವಿದ್ಯಾರ್ಥಿನಿಯರು ಬಡ ಮತ್ತು ಕೆಳ ಮಧ್ಯಮ ವರ್ಗದ ಕುಟುಂಬಗಳಿಂದ ಬಂದವರು. ದೇವರ ದಯೆಯಿಂದ ನಾಲ್ವರು ವಿದ್ಯಾರ್ಥಿನಿಯರು ಮೆರಿಟ್ನಲ್ಲಿ ಉತ್ತೀರ್ಣರಾದರು. 10ನೇ ತರಗತಿಯಿಂದ ಇಬ್ಬರು ಮತ್ತು 12ನೇ ತರಗತಿಯಿಂದ ಇಬ್ಬರು ವಿದ್ಯಾರ್ಥಿಗಳು ಮೆರಿಟ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ಎಂದು ಸಂತಸ ಹಂಚಿಕೊಂಡು ಅವರು, 12ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರಾದ ಭಜನ್‌ಪ್ರೀತ್ ಕೌರ್ ಮತ್ತು ಸಿಮ್ರಂಜಿತ್ ಕೌರ್ ಅವರು ಕಳೆದ ವರ್ಷ ನವೆಂಬರ್‌ನಲ್ಲಿ ಅಮೃತಸರದಿಂದ ಗೋವಾಕ್ಕೆ ವಿಮಾನದಲ್ಲಿ ತೆರಳಿದ್ದರು. ಇಬ್ಬರೂ ಗೋವಾದಲ್ಲಿ ನಡೆದ ಇಂಡಿಯಾ ಇಂಟರ್‌ನ್ಯಾಷನಲ್ ಇನ್ನೋವೇಶನ್ ಮತ್ತು ಇನ್ವೆನ್ಶನ್ ಎಕ್ಸ್‌ಪೋ (INEX-2022)ದಲ್ಲಿ ಭಾಗವಹಿಸಿದ್ದರು ಎಂದು ಹೇಳಿದ್ದಾರೆ.
ಇದೇ ತಿಂಗಳು ಮತ್ತಿಬ್ಬರಿಗೆ ವಿಮಾನ ಪ್ರಯಾಣ:10ನೇ ತರಗತಿಯಲ್ಲಿ ಮೆರಿಟ್ನಲ್ಲಿ ಉತ್ತೀರ್ಣರಾದ ಮತ್ತಿಬ್ಬರನ್ನೂ ನನ್ನದೇ ವೆಚ್ಚದಲ್ಲಿ ವಿಮಾನ ಪ್ರಯಾಣ ಮಾಡಿಸಲಿದ್ದೇನೆ. ಇದೇ ಜನವರಿ ಕೊನೆಯ ವಾರದಲ್ಲಿ ಈ ಇಬ್ಬರು ವಿದ್ಯಾರ್ಥಿನಿಯರು ಅಮೃತಸರದಿಂದ ದೆಹಲಿಗೆ ವಿಮಾನದಲ್ಲಿ ಹೋಗಲಿದ್ದಾರೆ. ರಾಷ್ಟ್ರ ರಾಜಧಾನಿಯ ರಾಷ್ಟ್ರಪತಿ ಭವನ, ಕೆಂಪು ಕೋಟೆ ಮತ್ತು ಇತರ ಸ್ಥಳಗಳಿಗೆ ವಿದ್ಯಾರ್ಥಿಗಳು ಭೇಟಿ ನೀಡಲಿದ್ದಾರೆ ಎಂದು ಪ್ರಾಂಶುಪಾಲರಾದ ರಾಕೇಶ್ ಶರ್ಮಾ ತಿಳಿಸಿದ್ದಾರೆ.
ಪ್ರಥಮ ಸ್ಥಾನ ಪಡೆದ ಶಾಲೆ: ರಾಕೇಶ್ ಶರ್ಮಾ ಅವರು 2019ರಲ್ಲಿ ಶಹೀದ್ ಗುರುದಾಸ್ ರಾಮ್ ಮೆಮೋರಿಯಲ್ ಶಾಲೆಯ ಪ್ರಾಂಶುಪಾಲರಾದಾಗ, ಈ ಶಾಲೆಯು ಜಿಲ್ಲೆಯ 56 ಶಾಲೆಗಳ ಪೈಕಿ 48ನೇ ಸ್ಥಾನದಲ್ಲಿತ್ತು. ಇದೀಗ ಈ ಶಾಲೆ ಫಿರೋಜ್‌ಪುರ ಜಿಲ್ಲೆಯಲ್ಲಿ ಪ್ರಥಮ ಸ್ಥಾನಕ್ಕೆ ತಲುಪಿದೆ. ಅಲ್ಲದೇ, 10ನೇ ಮತ್ತು 12ನೇ ತರಗತಿಯ 22 ವಿದ್ಯಾರ್ಥಿನಿಯರು ಸಹ ಮೆರಿಟ್ನಲ್ಲಿ ಪಾಸ್ ಆಗುವ ತೀರ್ಮಾನ ಮಾಡಿದ್ದು, ತಮ್ಮ ವಿಮಾನ ಪ್ರಯಾಣದ ಆಸೆಯನ್ನೂ ಪ್ರಾಂಶುಪಾಲರ ಮುಂದೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಜ. 13ರಂದು ವಿಶ್ವದ ಅತಿ ಉದ್ದದ ಗಂಗಾ ವಿಲಾಸ್ ನೌಕೆಗೆ ಮೋದಿ ಚಾಲನೆ.. ಈ ಹಡಗಿನಲ್ಲಿದೆ ಐಷಾರಾಮಿ ಸೌಲಭ್ಯ