ಚಂಡೀಗಢ:ಸಶಸ್ತ್ರ ಪಡೆಗಳಿಗೆ ಅಲ್ಪಾವಧಿಗೆ ನೇಮಕಾತಿ ಮಾಡಿಕೊಳ್ಳುವ ಅಗ್ನಿಪಥ್ ಯೋಜನೆ ವಿರುದ್ಧ ಪಂಜಾಬ್ ಸರ್ಕಾರ ವಿಧಾನಸಭೆಯಲ್ಲಿ 'ಖಂಡನಾ ನಿರ್ಣಯ' ಕೈಗೊಳ್ಳಲು ಸಜ್ಜಾಗಿದೆ. ಇದೇ 30 ರಂದು ವಿಧಾನಸಭೆಯಲ್ಲಿ ನಿರ್ಣಯ ಪಾಸ್ ಮಾಡಲು ಮುಂದಾಗಿದೆ.
ಪಂಜಾಬ್ ವಿಧಾನಸಭೆ ಅಧಿವೇಶನ ನಡೆಯುತ್ತಿದ್ದು, ಪ್ರತಿಪಕ್ಷಗಳು ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ಗದ್ದಲ ಎಬ್ಬಿಸಿದರು. ಸೇನೆಯಲ್ಲಿ ಪಂಜಾಬಿ ಯುವಕರ ಕೊಡುಗೆ ಅಪಾರವಾಗಿದೆ. ನೆರೆಯ ರಾಷ್ಟ್ರಗಳಾದ ಚೀನಾ, ಪಾಕಿಸ್ತಾನ ಬೆದರಿಕೆಯೊಡ್ಡುತ್ತಿದ್ದರೆ, ಮತ್ತೊಂದೆಡೆ ಗುತ್ತಿಗೆ ಆಧಾರದ ಮೇಲೆ ಸೈನಿಕರನ್ನು ನೇಮಕ ಮಾಡಿಕೊಂಡು ದೇಶ ರಕ್ಷಣೆ ಮಾಡುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿವೆ. ಅಲ್ಲದೆ, ಅಗ್ನಿಪಥ್ ಯೋಜನೆ ಯುವಕರ ಹಿತಾಸಕ್ತಿಗೆ ವಿರುದ್ಧವಾಗಿದೆ. ಇದರ ವಿರುದ್ಧ ಎಲ್ಲಾ ಪಕ್ಷಗಳು ಒಗ್ಗೂಡಿ ನಿರ್ಣಯ ತರಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಸಿಎಂ ಭಗವಂತ್ ಮಾನ್, ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯಿಂದ ಆಘಾತವಾಗಿದೆ. 17ನೇ ವಯಸ್ಸಿಗೆ ಸೇನೆಗೆ ಸೇರಿ 21ನೇ ವಯಸ್ಸಿಗೆ 4 ವರ್ಷ ಪೂರೈಸಿ ನಿವೃತ್ತರಾಗುವ ಯುವಕರು ತಾವು ಮಾಜಿ ಸೈನಿಕರು ಎಂದು ಹೇಳಿಕೊಳ್ಳಲೂ ಸಾಧ್ಯವಾಗುವುದಿಲ್ಲ. ಅಲ್ಲದೇ, ಅವರಿಗೆ ಯಾವುದೇ ಸೌಲಭ್ಯಗಳೂ ಇರುವುದಿಲ್ಲ. ಪಂಜಾಬ್ ಸರ್ಕಾರ ಈ ಯೋಜನೆಯ ವಿರುದ್ಧವಾಗಿದೆ. ಇದರ ವಿರುದ್ಧ ನಿರ್ಣಯ ತರಲಾಗುವುದು ಎಂದು ಹೇಳಿದರು.