ಚಂಡೀಗಢ:ಸಿಎಂಭಗವಂತ್ ಸಿಂಗ್ ಮಾನ್ ನೇತೃತ್ವದ ಪಂಜಾಬ್ ಸರ್ಕಾರವು ಬೇಸಿಗೆಯಲ್ಲಿ ವಿದ್ಯುತ್ ಬಳಕೆ ಕಡಿಮೆ ಮಾಡಲು ರಾಜ್ಯದ ಎಲ್ಲ ಸರ್ಕಾರಿ ಕಚೇರಿಗಳ ಸಮಯ ಬದಲಾವಣೆ ಮಾಡಿ ಮಹತ್ವದ ಆದೇಶ ಹೊರಡಿಸಿದೆ. ಸರ್ಕಾರಿ ಕಚೇರಿಗಳು ಬೆಳಗ್ಗೆ 7:30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕಾರ್ಯನಿರ್ವಹಿಸಲು ಅನುವು ಮಾಡಿಕೊಡಲಾಗಿದೆ. ಹೀಗಾಗಿ, ಪಂಜಾಬ್ ಸಿಎಂ ಭಗವಂತ್ ಸಿಂಗ್ ಮಾನ್ ಅವರಿಂದು ಬೆಳಿಗ್ಗೆ 7.30ಕ್ಕೇ ತಮ್ಮ ಕಚೇರಿ ತಲುಪಿದರು.
ಭಗವಂತ್ ಮಾನ್ ಜನರನ್ನು ಉದ್ದೇಶಿಸಿ ಮಾತನಾಡಿ, ಪಂಜಾಬ್‌ನಲ್ಲಿ ಸರ್ಕಾರಿ ಕಚೇರಿ ಸಮಯ ಇಂದು ಬದಲಾಗಿದೆ. ಇಂದಿನಿಂದ ಜುಲೈ 15 ರಿಂದ ಕಚೇರಿಗಳು ಬೆಳಗ್ಗೆ 7:30 ರಿಂದ ಮಧ್ಯಾಹ್ನ 2 ರ ವರೆಗೆ ಮಾತ್ರ ತೆರೆದಿರುತ್ತವೆ ಎಂದು ತಿಳಿಸಿದ್ದಾರೆ. ಪಂಜಾಬ್ ಸರ್ಕಾರ ತೆಗೆದುಕೊಂಡ ನಿರ್ಧಾರದಿಂದ ದಿನಕ್ಕೆ 2 ರಿಂದ 3 ಗಂಟೆಗಳ ಕಾಲ ವಿದ್ಯುತ್ ಉಳಿತಾಯವಾಗಲಿದೆ. ಎಲ್ಲ ಇಲಾಖೆಗಳಿಗೆ ಪತ್ರ ಬರೆಯಲಾಗಿದ್ದು, ಕಚೇರಿ ಸಮಯ ಬದಲಾವಣೆಯಿಂದ ಜನಸಾಮಾನ್ಯರಿಗೂ ಬಿಸಿಲಿನ ತಾಪದಿಂದ ಮುಕ್ತಿ ದೊರೆಯಲಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಈ ನಿರ್ಧಾರವನ್ನು ಜಾರಿಗೆ ತರುವ ಮುನ್ನ ಜನರು ಮತ್ತು ನೌಕರರೊಂದಿಗೆ ಚರ್ಚಿಸಿದ್ದೆವು. ಎಲ್ಲರೂ ಒಪ್ಪಿಗೆ ಸೂಚಿಸಿದ್ದು ಒಮ್ಮತದಿಂದ ನಿರ್ಧಾರ ಜಾರಿಗೆ ತರಲಾಗಿದೆ. ಪ್ರಸಕ್ತ ವರ್ಷ ಬಿಸಿಲಿನ ತೀವ್ರತೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಚೇರಿಗಳ ಸಮಯವನ್ನು ಬದಲಾಯಿಸುವುದರಿಂದ ಜನರು ತಮ್ಮ ಕೆಲಸಗಳನ್ನು ತ್ವರಿತವಾಗಿ ಮಾಡಲು ಮತ್ತು ಸಮಯಕ್ಕೆ ಸರಿಯಾಗಿ ಮನೆಗೆ ಹೋಗಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿದೇಶಗಳಲ್ಲೂ ಈ ರೀತಿ ಕೆಲಸದ ನಿಯಮ ಬದಲಿಸಲಾಗುತ್ತದೆ ಎಂದ ಹೇಳಿದ ಮಾನ್, ಜನರು ಹವಾಮಾನಕ್ಕೆ ತಕ್ಕಂತೆ ಗಡಿಯಾರದ ಸಮಯವನ್ನು ಬದಲಾಯಿಸುತ್ತಾರೆ. ಆದರೆ ಭಾರತದಲ್ಲಿ ಇದನ್ನು ಮಾಡಲು ಸಾಧ್ಯವಿಲ್ಲ. ನಾವು ಕಾಲಕ್ಕೆ ತಕ್ಕಂತೆ ಬದಲಾಗಿದ್ದೇವೆ ಎಂದರು.