ಕರ್ನಾಟಕ

karnataka

ETV Bharat / bharat

ಕೆನಡಾದಲ್ಲಿ ಮತ್ತೊಬ್ಬ ಖಲಿಸ್ತಾನ ಉಗ್ರನ ಹತ್ಯೆ: ದುಷ್ಕರ್ಮಿಗಳ ಗುಂಡೇಟಿಗೆ ಸುಖ್ದೂಲ್ ಸಿಂಗ್ ಬಲಿ - Khalistan supporter killed in canada

ಕೆನಡಾದಲ್ಲಿ ಮತ್ತೊಬ್ಬ ಖಲಿಸ್ತಾನ ಉಗ್ರನನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಖಲಿಸ್ತಾನ್​ ವಿಚಾರವಾಗಿ ಕೆನಡಾ ಮತ್ತು ಭಾರತದ ಮಧ್ಯೆ ಸಂಬಂಧ ಹಳಸಿದ ಬೆನ್ನಲ್ಲೇ ಈ ಘಟನೆ ನಡೆದಿದೆ.

ಕೆನಡಾದಲ್ಲಿ ಮತ್ತೊಬ್ಬ ಖಲಿಸ್ತಾನ ಉಗ್ರ ಖತಂ
ಕೆನಡಾದಲ್ಲಿ ಮತ್ತೊಬ್ಬ ಖಲಿಸ್ತಾನ ಉಗ್ರ ಖತಂ

By ETV Bharat Karnataka Team

Published : Sep 21, 2023, 1:11 PM IST

ನವದೆಹಲಿ :ಖಲಿಸ್ತಾನಿ ಉಗ್ರ ಹರ್​ದೀಪ್​ ಸಿಂಗ್​ ನಿಜ್ಜರ್​ ಸಾವಿನ ಕಾರಣ ಕೆನಡಾ ಮತ್ತು ಭಾರತದ ಮಧ್ಯೆ ರಾಜತಾಂತ್ರಿಕ ಸಂಬಂಧ ಹಳಸಿದ ಬೆನ್ನಲ್ಲೇ ಇನ್ನೊಬ್ಬ ಖಲಿಸ್ತಾನ ಉಗ್ರ ಮತ್ತು ಮೋಸ್ಟ್ ವಾಂಟೆಡ್​ ಗ್ಯಾಂಗ್​ಸ್ಟರ್​ ಸುಖ್ದೂಲ್ ಸಿಂಗ್ ಅಲಿಯಾಸ್ ಸುಖ ಡುನೆಕೆ ಎಂಬಾತನ ಹತ್ಯೆ ನಡೆದಿದೆ. ಈಚೆಗೆ ನಡೆದ ಗುಂಡಿನ ದಾಳಿಯಲ್ಲಿ ಈತ ಮೃತಪಟ್ಟಿದ್ದಾನೆ ಎಂದು ತನಿಖಾ ಸಂಸ್ಥೆಗಳು ದೃಢಪಡಿಸಿವೆ.

ಕೆನಡಾದ ವಿನ್ನಿಪೆಗ್‌ನಲ್ಲಿ ಸೆಪ್ಟೆಂಬರ್ 18 ರಂದು ನಡೆದ ಗುಂಡಿನ ಚಕಮಕಿಯಲ್ಲಿ ಸುಖ್ದೂಲ್ ಸಿಂಗ್ ಮೇಲೆ ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ಮಾಡಿ ಕೊಂದಿದ್ದಾರೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಎಕ್ಸ್​ನಲ್ಲಿ (ಹಿಂದಿನ ಟ್ವಿಟರ್​) ಮಾಹಿತಿ ಹಂಚಿಕೊಂಡಿರುವ ಪೊಲೀಸರು, ಮೂರು ದಿನಗಳ ಹಿಂದೆ ಸಂಜೆ 6:20 ರ ಸುಮಾರಿನಲ್ಲಿ ಆಲ್ಡ್‌ಗೇಟ್ ರಸ್ತೆ ಮತ್ತು ಗೋಬರ್ಟ್ ಕ್ರೆಸೆಂಟ್ ಪ್ರದೇಶದಲ್ಲಿ ಗುಂಡಿನ ದಾಳಿ ನಡೆದಿತ್ತು. ಘಟನೆಯಲ್ಲಿ ಗ್ಯಾಂಗ್​ಸ್ಟರ್​ ಸಾವಿಗೀಡಾಗಿದ್ದಾನೆ. ಅಪರಾಧಗಳ ನಿಗ್ರಹ ಘಟಕ ತನಿಖೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.

ಸಾವು ದೃಢಪಡಿಸಿದ ಭಾರತ:ಇದರ ಜೊತೆಗೆ ಭಾರತೀಯ ಗುಪ್ತಚರ ಸಂಸ್ಥೆಗಳೂ ಸುಖ್ದೂಲ್ ಸಿಂಗ್ ಸಾವನ್ನು ದೃಢಪಡಿಸಿವೆ. ಸುಖ್ದೂಲ್​ನನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ಎರಡು ಗ್ಯಾಂಗ್​ಗಳ ನಡುವಿನ ವೈಷಮ್ಯದಿಂದಾಗಿ ಆತನ ಕೊಲೆ ನಡೆದಿದೆ. ಆದರೆ, ಇದುವರೆಗೂ ಹತ್ಯೆಯ ಹೊಣೆಯನ್ನು ಯಾವುದೇ ತಂಡ ಹೊತ್ತುಕೊಂಡಿಲ್ಲ ಎಂದು ಹೇಳಿವೆ.

ಸುಖ ಡುನೆಕೆ ಎಂದೇ ಹೆಸರಾಗಿದ್ದ ಗ್ಯಾಂಗ್​ಸ್ಟರ್​ ದಾವೀಂದರ್ ಬಾಂಬಿಹಾ ಗ್ಯಾಂಗ್‌ನಲ್ಲಿ ಗುರುತಿಸಿಕೊಂಡಿದ್ದ. ಸ್ಥಳೀಯ ಪೊಲೀಸರ ನೆರವಿನಿಂದ 2017ರಲ್ಲಿ ಪಂಜಾಬ್​​ನಿಂದ ಪರಾರಿಯಾಗಿದ್ದ. ನಕಲಿ ದಾಖಲೆಗಳು, ಪಾಸ್ಟ್​ಪೋರ್ಟ್​, ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರವನ್ನು ಸೃಷ್ಟಿಸಿ ಕೆನಡಾಗೆ ಪಲಾಯನ ಮಾಡಿದ್ದ. ಈತನ ವಿರುದ್ಧ ಏಳು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.

ಖಲಿಸ್ತಾನ್​ ಪರ ಕೆಲಸ:ಡುನೆಕೆ ಖಲಿಸ್ತಾನ್ ಪರ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದ್ದ. ಕೆನಡಾ ಮೂಲದ ಖಲಿಸ್ತಾನ್ ಉಗ್ರ ಅರ್ಷ್‌ದೀಪ್ ಸಿಂಗ್ ಅಕಾ ಅರ್ಶ್ ದಲಾನ ಜೊತೆಗೆ ನಂಟು ಹೊಂದಿದ್ದು, ಭಾರತದಲ್ಲಿ ಗುರುತಿಸಿದ ಭಯೋತ್ಪಾದಕರೊಂದಿಗೆ ಸೇರಿಕೊಂಡು ನಾನಾ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎಂಬ ಆರೋಪವಿದೆ. ಈತನ ವಿರುದ್ಧ ಸುಲಿಗೆ, ಸುಪಾರಿ ಕೊಲೆ, ಇತರ ಘೋರ ಅಪರಾಧಗಳು ಸೇರಿದಂತೆ 20 ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.

2022 ರಲ್ಲಿ ಕಬಡ್ಡಿ ಪಂದ್ಯದ ವೇಳೆ ಡುನೆಕೆ ತನ್ನ ಸಹಚರರ ಸಹಾಯದಿಂದ ಕಬಡ್ಡಿ ಆಟಗಾರ ಸಂದೀಪ್ ಸಿಂಗ್ ನಂಗಲ್ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದ ಎಂಬ ಆರೋಪವೂ ಇದೆ. ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಬಿಡುಗಡೆ ಮಾಡಿದ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಡುನೆಕೆ ಇದ್ದ. ಈತನ ಫೋಟೋವನ್ನು ಹಂಚಿಕೊಂಡಿತ್ತು.

2ನೇ ಖಲಿಸ್ತಾನಿ ಉಗ್ರನ ಹತ್ಯೆ:ಇದಕ್ಕೂ ಮೊದಲು ಖಲಿಸ್ತಾನಿ ಬೆಂಬಲಿಗ ಉಗ್ರ ಹರ್​ದೀಪ್ ಸಿಂಗ್ ನಿಜ್ಜರ್ ಜೂನ್​ 19 ರಂದು ನಡೆದ ಕೊಲಂಬಿಯಾದಲ್ಲಿ ನಡೆದ ದಾಳಿಯಲ್ಲಿ ಸಾವಿಗೀಡಾಗಿದ್ದ. ಇದರಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾ ಅಧ್ಯಕ್ಷ ಜಸ್ಟಿನ್​ ಟ್ರುಡೋ ಗಂಭೀರ ಆರೋಪ ಮಾಡಿದ್ದಾರೆ. ಇದನ್ನು ಭಾರತ ಸರ್ಕಾರ ನಿರಾಕರಿಸಿದೆ. ಉಭಯ ದೇಶಗಳ ರಾಜತಾಂತ್ರಿಕ ಅಧಿಕಾರಿಗಳನ್ನು ದೇಶದಿಂದ ಉಚ್ಚಾಟಿಸಲಾಗಿದೆ.

ಇದನ್ನೂ ಓದಿ:ಯಾರು ಈ ಖಲಿಸ್ತಾನಿ ಉಗ್ರ ಹರ್ದೀಪ್​ ಸಿಂಗ್​ ನಿಜ್ಜರ್? ಭಾರತ ಈತನನ್ನು ಉಗ್ರರ ಪಟ್ಟಿಗೆ ಸೇರಿಸಿದ್ದೇಕೆ? ಸಂಪೂರ್ಣ ಮಾಹಿತಿ

ABOUT THE AUTHOR

...view details