ನವದೆಹಲಿ: ಪಂಜಾಬ್ ವಿಧಾನಸಭಾ ಚುನಾವಣೆಗೆ ಎಂಟು ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದ್ದು, ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ ಅವರು ಭದೌರ್ ಮತ್ತು ಚಮ್ಕೌರ್ ಸಾಹಿಬ್ ಎಂಬ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಲು ಸಜ್ಜಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ.
ಈಗಾಗಲೇ ನವಜೋತ್ ಸಿಧು ಜೊತೆಗಿನ ವೈಮನಸ್ಸಿನಿಂದಾಗಿ ಅಮರಿಂದರ್ ಸಿಂಗ್ ಕಾಂಗ್ರೆಸ್ ತೊರೆದಿದ್ದು, ಪಟಿಯಾಲ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಇಳಿದಿದ್ದಾರೆ. ಕಾಂಗ್ರೆಸ್, ಅಮರಿಂದರ್ ಸಿಂಗ್ ವಿರುದ್ಧ ಪಟಿಯಾಲ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮೇಯರ್ ವಿಷ್ಣು ಶರ್ಮಾ ಅವರನ್ನು ಕಣಕ್ಕಿಳಿಸಿದೆ. ಶರ್ಮಾ ಅವರು ಒಂದು ಕಾಲದಲ್ಲಿ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ನಿಕಟವರ್ತಿ ಎಂದು ಪರಿಗಣಿಸಲಾಗಿತ್ತು. ಮಾಜಿ ಕೇಂದ್ರ ಸಚಿವ ಪವನ್ ಕುಮಾರ್ ಬನ್ಸಾಲ್ ಅವರ ಪುತ್ರ ಮನೀಶ್ ಬನ್ಸಾಲ್ ಅವರನ್ನು ಬರ್ನಾಲಾ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ.
ಶಿರೋಮಣಿ ಅಕಾಲಿದಳದ ಸುಖಬೀರ್ ಸಿಂಗ್ ಬಾದಲ್ ವಿರುದ್ಧ ಜಲಾಬಾದ್ ವಿಧಾನಸಭಾ ಕ್ಷೇತ್ರದಿಂದ ಮೋಹನ್ ಸಿಂಗ್ ಫಲಿಯನ್ ವಾಲಾ ಅವರು ಅಭ್ಯರ್ಥಿ ಎಂದು ಕಾಂಗ್ರೆಸ್ ಘೋಷಿಸಿದೆ. ಖೇಮ್ ಕರಣ್‌ನಿಂದ ಸುಖ್ಪಾಲ್ ಸಿಂಗ್ ಭುಲ್ಲರ್ ಮತ್ತು ಅಟ್ಟಾರಿ (ಎಸ್‌ಸಿ) ಕ್ಷೇತ್ರದಿಂದ ತಾರ್ಸೆಮ್ ಸಿಂಗ್ ಸಿಯಾಲಾ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಸತ್ವೀರ್ ಸಿಂಗ್ ಸೈನಿ ಬಲಿಚಿಕಿ ನವನ್‌ಶಹರ್‌ನಿಂದ ಸ್ಪರ್ಧಿಸಲಿದ್ದು, ಲುಧಿಯಾನ ದಕ್ಷಿಣದಿಂದ ಕಾಂಗ್ರೆಸ್ ಈಶ್ವರ್ ಜೋತ್ ಸಿಂಗ್ ಚೀಮಾ ಅವರನ್ನು ಕಣಕ್ಕಿಳಿಸಲಾಗಿದೆ.