ಮೊಹಾಲಿ( ಪಂಜಾಬ್): ಮೊಹಾಲಿಯಲ್ಲಿರುವ ಪಂಜಾಬ್ ಪೊಲೀಸ್ ಗುಪ್ತಚರ ವಿಭಾಗದ ಕೇಂದ್ರ ಕಚೇರಿ ಮೇಲೆ ಸೋಮವಾರ ತಡರಾತ್ರಿ ದಾಳಿ ನಡೆದಿದೆ. ಸ್ಫೋಟದ ಬಳಿಕ ಸ್ಥಳದಲ್ಲಿ ಭಾರಿ ಆತಂಕ ಸೃಷ್ಟಿಯಾಗಿತ್ತು. ಘಟನೆ ನಡೆದ ತಕ್ಷಣ ಸ್ಥಳಕ್ಕೆ ಧಾವಿಸಿದ ಪಂಜಾಬ್ ಡಿಜಿಪಿ ಭಾವ್ರಾ ಪರಿಸ್ಥಿತಿಯ ಪರಿಶೀಲನೆ ನಡೆಸಿದರು.
ತೀವ್ರ ತರಹದಲ್ಲಿ ದಾಳಿ ನಡೆದಿದ್ದು, ಇದನ್ನು ಭೇದಿಸುವುದು ಸವಾಲು ಎಂದು ಡಿಜಿಪಿ ಹೇಳಿದ್ದಾರೆ. ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದ ಡಿಜಿಪಿ ಭಾವ್ರಾ, ಸ್ಫೋಟದಿಂದ ಕಟ್ಟಡಕ್ಕೆ ಹಾನಿಯಾಗಿದ್ದು, ಶೀಘ್ರದಲ್ಲೇ ಸಮಸ್ಯೆ ಪರಿಹರಿಸಲಾಗುವುದು ಎಂದು ಹೇಳಿದರು. ಘಟನೆಗೆ ಕಾರಣರಾದವರ ಪತ್ತೆ ಹಾಗೂ ಬಂಧನಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಭಾವ್ರಾ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ವಿಭಿನ್ನ ಹೇಳಿಕೆ:ಆದರೆ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಸಿಎಂ ಭಗವಂತ್ ಮಾನ್, ಘಟನೆಗೆ ಕಾರಣರಾದವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ತನಿಖೆ ನಡೆಸಿ ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುವುದಾಗಿ ಘೋಷಿಸಿದ್ದಾರೆ. ಈಗಾಗಲೇ ಕೆಲವರನ್ನು ಬಂಧಿಸಲಾಗಿದೆ ಎಂದೂ ಹೇಳಿದ್ದಾರೆ. ಆದರೆ, ಡಿಜಿಪಿ ಮಾತ್ರ ಪ್ರಕರಣ ಭೇದಿಸುವುದು ಸವಾಲು ಎಂದು ಹೇಳಿದ್ದಾರೆ. ಇಬ್ಬರ ಹೇಳಿಕೆಗಳಿಗೆ ಅಜಗಜಾಂತರ ಇರುವುದರಿಂದ ಹಲವು ಅನುಮಾನಗಳು ವ್ಯಕ್ತವಾಗಿವೆ.
ಸಿಎಂ ಭಗವಂತ್ ಮಾನ್ ಹೇಳಿದ್ದೇನು?: ಪ್ರಕರಣದಲ್ಲಿ ಕೆಲವರನ್ನು ಬಂಧಿಸಲಾಗಿದೆ ಎಂದು ಸಿಎಂ ಮಾನ್ ಹೇಳಿದ್ದಾರೆ. ಪ್ರಕರಣದಲ್ಲಿ ಕೆಲವರನ್ನು ಬಂಧಿಸಲಾಗಿದೆ, ಇನ್ನೂ ಕೆಲವರನ್ನು ಬಂಧಿಸಲಾಗುವುದು. ಪ್ರಕರಣದ ಕುರಿತು ಆಳವಾದ ತನಿಖೆ ನಡೆಸಲಾಗುತ್ತಿದೆ. ಪಂಜಾಬ್ನಲ್ಲಿ ಅಶಾಂತಿ ಸೃಷ್ಟಿಸುವವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಹೇಳಿದ್ದಾರೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಪ್ತಚರ ಇಲಾಖೆ ತ್ವರಿತ ತನಿಖೆ ನಡೆಸುತ್ತಿದೆ ಎಂದು ಸಿಎಂ ಸ್ಪಷ್ಟ ಪಡಿಸಿದ್ದರು.
ಇದನ್ನು ಓದಿ:ಮೊಹಾಲಿಯ ಗುಪ್ತಚರ ಇಲಾಖೆ ಕಚೇರಿ ಮೇಲೆ ರಾಕೆಟ್ ಲಾಂಚರ್ನಿಂದ ದಾಳಿ ಶಂಕೆ; ಗಾಜುಗಳು ಪುಡಿಪುಡಿ