ಚಂಡೀಗಢ: ಪಕ್ಷದಲ್ಲಿನ ಭಿನ್ನಾಭಿಪ್ರಾಯದಿಂದಾಗಿ ಪಂಜಾಬ್ನಲ್ಲಿ ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್ ಅಧಿಕಾರ ಕಳೆದುಕೊಂಡರೂ, ಈವರೆಗೂ ಭಿನ್ನಮತ ಶಮನವಾಗಿಲ್ಲ. ರಾಜ್ಯ ಕಾಂಗ್ರೆಸ್ನಿಂದ ದೂರವಾಗಿ ಏಕಾಂಗಿಯಾಗಿ ಗುರುತಿಸಿಕೊಂಡಿರುವ ಪಕ್ಷದ ಮಾಜಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು, ಸ್ಥಳೀಯ ನಾಯಕರ ಬಗ್ಗೆ ಗೌರವ ಹೊಂದಿಲ್ಲ.
ಈ ಬಗ್ಗೆ ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಹರೀಶ್ ಚೌಧರಿ ಅವರು ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಎರಡು ದಿನಗಳ ಹಿಂದೆ ಪತ್ರ ಬರೆದಿದ್ದು, ನವಜೋತ್ ಸಿಂಗ್ ಸಿಧು ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಇದೀಗ ಈ ಬಗ್ಗೆ ನವಜೋತ್ ಸಿಂಗ್ ಸಿಧು ಕಾವ್ಯಾತ್ಮಕವಾಗಿ ಟ್ವೀಟ್ ಮಾಡುವ ಮೂಲಕ ಮೌನ ಮುರಿದಿದ್ದಾರೆ. ಅಲ್ಲದೇ ತಮ್ಮ ಬಂಡಾಯವನ್ನು ಈ ಟ್ವೀಟ್ನಲ್ಲಿ ವ್ಯಕ್ತಪಡಿಸಿದ್ದಾರೆ. 'ನಾನು ಆಗಾಗ್ಗೆ ನನ್ನ ವಿರುದ್ಧದ ವಿಷಯಗಳನ್ನು ಮೌನವಾಗಿ ಕೇಳುತ್ತೇನೆ. ಕಾಲಕಾಲಕ್ಕೆ ಉತ್ತರಿಸುವ ಹಕ್ಕನ್ನು ನಾನು ಕಾಯ್ದಿರಿಸಿದ್ದೇನೆ' ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಸಿಧು ತಮ್ಮ ವಿರುದ್ಧ ಸೆಟೆದು ನಿಂತಿರುವ ಸ್ಥಳೀಯ ನಾಯಕರಿಗೆ ಸೊಪ್ಪು ಹಾಕಲ್ಲ ಎಂಬುದನ್ನು ಬಹಿರಂಗಪಡಿಸಿದ್ದಾರೆ.
ನವಜೋತ್ ಸಿಂಗ್ ಸಿಧು ಅವರ ಈ ಟ್ವೀಟ್ ಮೂಲಕ ಅವರು ಯಾರ ಮಾತನ್ನೂ ಕೇಳುತ್ತಿಲ್ಲ ಮತ್ತು ಪಂಜಾಬ್ ಪ್ರದೇಶ ಸಮಿತಿಯೊಂದಿಗೆ ಹೊಂದಿಕೊಂಡು ಹೋಗಲು ಸಿದ್ಧರಿಲ್ಲ ಎಂಬುದು ಸ್ಪಷ್ಟವಾಗಿದೆ. ಹೀಗಾಗಿ ಪಂಜಾಬ್ ಕಾಂಗ್ರೆಸ್ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಹೈಕಮಾಂಡ್ಗೆ ಆಗ್ರಹಿಸಿದೆ.
ಓದಿ:ಹುಟ್ಟೂರಿಗೆ ಭೇಟಿ ನೀಡಿ ತಾಯಿ ಆಶೀರ್ವಾದ ಪಡೆದ ಯೋಗಿ.. ಪ್ರಧಾನಿ ಮೋದಿ ಜೊತೆ ಹೋಲಿಕೆ