ಚಂಡೀಗಢ(ಪಂಜಾಬ್):ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿ ಇಂದು ಪಂಜಾಬ್ ಪ್ರವಾಸ ಕೈಗೊಂಡಿದ್ದರು. ಫಿರೋಜ್ಪುರ್ನಲ್ಲಿ ಆಯೋಜನೆಗೊಂಡಿದ್ದ ರ್‍ಯಾಲಿಯಲ್ಲಿ ಭಾಗಿಯಾಗಲು ತೆರಳಿದ್ದ ಪ್ರಧಾನಿಗೆ ಭದ್ರತಾ ವೈಫಲ್ಯ ಎದುರಾಗಿದ್ದು, ಸಭೆಯಲ್ಲಿ ಭಾಗಿಯಾಗದೇ ದೆಹಲಿಗೆ ವಾಪಸ್ ಆಗಿದ್ದರು.
ಈ ವಿಚಾರವಾಗಿ ಮಾತನಾಡಿರುವ ಪಂಜಾಬ್ ಸಿಎಂ ಚರಂಜಿತ್ ಸಿಂಗ್ ಚನ್ನಿ, ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಯಲ್ಲಿ ಯಾವುದೇ ರೀತಿಯ ಲೋಪವಾಗಿಲ್ಲ, ಅವರು ಪಾಪಸ್ ಹೋಗಿರುವುದಕ್ಕೆ ವಿಷಾದವಿದೆ ಎಂದರು. ಮೋದಿ ಭದ್ರತೆಯಲ್ಲಿ ಯಾವುದಾದರೂ ಲೋಪ ಕಂಡು ಬಂದಿರುವುದು ಖಚಿತಗೊಂಡರೆ ತನಿಖೆ ನಡೆಸಲು ನಾವು ಸಿದ್ಧ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಪಂಜಾಬ್ನಲ್ಲಿ ಪ್ರಧಾನಿ ಮೋದಿಗೆ ಬಹುದೊಡ್ಡ ಭದ್ರತಾ ವೈಫಲ್ಯ: ಈ ವಿಡಿಯೋ ನೋಡಿ
ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿರುವ ಅವರು, ನಮ್ಮ ಪ್ರಧಾನಿ ಬಗ್ಗೆ ಗೌರವವಿದೆ. ಫಿರೋಜ್ಪುರ್ ಜಿಲ್ಲೆಗೆ ಭೇಟಿ ನೀಡುತ್ತಿದ್ದ ಸಂದರ್ಭದಲ್ಲಿ ಅವರು ಹಿಂತಿರುಗಿ ಹೋಗಿರುವುದಕ್ಕೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಬಟಿಂಡಾಗೆ ತೆರಳಿ ನಾನೇ ಪ್ರಧಾನಿಯವರನ್ನು ಬರಮಾಡಿಕೊಳ್ಳಬೇಕಾಗಿತ್ತು. ಆದರೆ ನನ್ನ ಜೊತೆಗಿದ್ದವರಲ್ಲಿ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದ್ದರಿಂದ ಅಲ್ಲಿಗೆ ಹೋಗಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.