ಚಂಡೀಗಢ(ಪಂಜಾಬ್):ಚಂಡೀಗಢ ನೌಕರರಿಗೆ ಕೇಂದ್ರೀಯ ಕಾನೂನು ಜಾರಿಗೊಳಿಸುವುದಾಗಿ ಅಮಿತ್ ಶಾ ಹೇಳಿರುವ ಬೆನ್ನಲ್ಲೇ ಪಂಜಾಬ್ ಸಿಎಂ ಭಗವಂತ್ ಮಾನ್ ಒಂದು ದಿನದ ವಿಶೇಷ ಅಧಿವೇಶನ ನಡೆಸಿದರು. ಈ ವೇಳೆ ಚಂಡೀಗಢವನ್ನು ಕೇಂದ್ರ ಸೇವಾ ನಿಯಮಗಳಿಗೆ ಒಳಪಡಿಸುವ ಕೇಂದ್ರದ ನಿರ್ಧಾರದ ವಿರುದ್ಧ ನಿರ್ಣಯ ಮಂಡಿಸಿದರು.
ಚಂಡೀಗಢವನ್ನು ತಕ್ಷಣವೇ ಪಂಜಾಬ್ಗೆ ವರ್ಗಾಯಿಸಬೇಕೆಂಬ ನಿರ್ಣಯವನ್ನು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಭಗವಂತ್ ಮಾನ್ ಮಂಡನೆ ಮಾಡಿದ್ದಾರೆ. ಪಂಜಾಬ್ ಮತ್ತು ಹರಿಯಾಣದ ರಾಜಧಾನಿಯಾಗಿ ಚಂಡೀಗಢ ಕಾರ್ಯನಿರ್ವಹಿಸುತ್ತಿದ್ದು, ಇದೊಂದು ಕೇಂದ್ರಾಡಳಿತ ಪ್ರದೇಶವಾಗಿದೆ.
ಕೇಂದ್ರಾಡಳಿತ ಪ್ರದೇಶವಾದ ಚಂಡೀಗಢದಲ್ಲಿ ಇನ್ಮುಂದೆ ಪಂಜಾಬ್ ಕಾನೂನುಗಳ ಬದಲಿಗೆ ಕೇಂದ್ರೀಯ ಸೇವಾ ಕಾಯ್ದೆ (ಕೇಂದ್ರಾಡಳಿತ ಪ್ರದೇಶಗಳಿಗೆ ಮೀಸಲಿರುವ ಕಾನೂನು)ಯ ನಿಯಮ ಅನುಷ್ಠಾನಗೊಳಿಸಲಾಗುತ್ತದೆ ಎಂದು ಕಳೆದ ಭಾನುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ. ಇದಕ್ಕೆ ಭಗವಂತ್ ಮಾನ್ ಸೇರಿದಂತೆ ಅನೇಕ ಪಕ್ಷಗಳಿಂದ ವಿರೋಧ ವ್ಯಕ್ತವಾಗಿದೆ.
ಇದನ್ನೂ ಓದಿ:ಜೆಟ್ ಇಂಧನ ಬೆಲೆಯಲ್ಲಿ ಶೇ. 2ರಷ್ಟು ಏರಿಕೆ.. ವಿಮಾನಯಾನ ಪ್ರಯಾಣ ದರ ಮತ್ತಷ್ಟು ದುಬಾರಿ!
ಅಮಿತ್ ಶಾ ಘೋಷಣೆಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದು ಪಂಜಾಬ್ ಮರುಸಂಘಟನೆ ಕಾಯ್ದೆಗೆ ವಿರುದ್ಧವಾಗಿದೆ. ಪಂಜಾಬ್ ಕೇಂದ್ರದ ನಿರ್ಧಾರದ ವಿರುದ್ಧ ತೀವ್ರ ಹೋರಾಟ ನಡೆಸಲಿದೆ. ಚಂಡೀಗಢದ ಮೇಲೆ ಪಂಜಾಬ್ಗೆ ಇರುವ ಹಕ್ಕುಗಳನ್ನು ಕಸಿದುಕೊಳ್ಳಲು ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ಈ ಕ್ರಮಕ್ಕೆ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.