ಪಟಿಯಾಲ್(ಪಂಜಾಬ್):ಪಟಿಯಾಲದಲ್ಲಿರುವ ಕಾಳಿ ಮಾತಾ ದೇವಸ್ಥಾನದ ಬಳಿ ಶಿವಸೇನೆ ಕಾರ್ಯಕರ್ತರು ಖಲಿಸ್ತಾನ್ ವಿರೋಧಿ ಮೆರವಣಿಗೆ ನಡೆಸುತ್ತಿದ್ದರು. ಈ ವೇಳೆ ಕಲ್ಲು ತೂರಾಟ, ಖಡ್ಗಗಳನ್ನು ಝಳಪಿಸಿರುವುದು ಸೇರಿದಂತೆ ಗುಂಪು ಘರ್ಷಣೆ ನಡೆದಿದೆ. ಹೀಗಾಗಿ, ಎರಡೂ ಕಡೆಯ ಗುಂಪುಗಳನ್ನು ಚದುರಿಸಿ ಪರಿಸ್ಥಿತಿ ನಿಭಾಯಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಬೇಕಾಯಿತು. ಸದ್ಯ ಸ್ಥಳದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಭಾರಿ ಪ್ರಮಾಣದ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ವಿವರ: ಪಟಿಯಾಲಾದ ಕಾಳಿ ದೇವಿ ಮಂದಿರ ಬಳಿ ಶಿವಸೇನೆ ಖಲಿಸ್ತಾನ್ ವಿರೋಧಿ ಮೆರವಣಿಗೆ ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ಇನ್ನೊಂದು ಗುಂಪು ಕಲ್ಲು ತೂರಾಟ, ಖಡ್ಗಗಳನ್ನು ಝಳಪಿಸಿದೆ ಎಂದು ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದ ದೃಶ್ಯಗಳೂ ವೈರಲ್ ಆಗಿವೆ. ಘರ್ಷಣೆ ತೀವ್ರ ಸ್ವರೂಪ ಪಡೆದುಕೊಳ್ತಿದ್ದಂತೆ ಸ್ಥಳಕ್ಕೆ ಹೆಚ್ಚಿನ ಪ್ರಮಾಣದ ಪೊಲೀಸ್ ಪಡೆಯನ್ನು ಕರೆಸಿಕೊಳ್ಳಲಾಗಿದ್ದು ಸದ್ಯ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ ಎಂದು ತಿಳಿದುಬಂದಿದೆ.