ನವದೆಹಲಿ:ಪಂಜಾಬ್ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿರುವ ಚರಣ್ಜಿತ್ ಸಿಂಗ್ ಚನ್ನಿ ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿ, ಕೆಲ ನಿಮಿಷಗಳ ಕಾಲ ಚರ್ಚೆ ನಡೆಸಿದರು. ಈ ವೇಳೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆ ರದ್ದತಿಗೆ ಒತ್ತಾಯಿಸಿದ್ದಾಗಿ ತಿಳಿಸಿದ್ದಾರೆ.
ಸಿಎಂ ಆದ ಬಳಿಕ ಪ್ರಧಾನಿ ಮೋದಿಯವರನ್ನು ಮೊದಲ ಸಲ ಭೇಟಿ ಮಾಡಿರುವ ಚನ್ನಿ, ಪ್ರತಿಭಟನಾನಿರತ ರೈತರೊಂದಿಗೆ ಕೇಂದ್ರ ಸರ್ಕಾರ ಮತ್ತೊಮ್ಮೆ ಮಾತುಕತೆ ನಡೆಸಬೇಕು. ಜೊತೆಗೆ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆ ಹಿಂಪಡೆದುಕೊಳ್ಳುವಂತೆ ಒತ್ತಾಯಿಸಿದ್ದಾಗಿ ತಿಳಿಸಿದರು. ಈಗಾಗಲೇ ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೆ ಪಂಜಾಬ್ ಸರ್ಕಾರ ಬೆಂಬಲ ಸೂಚಿಸಿದ್ದು, ಇದರ ಬೆನ್ನಲ್ಲೇ ನಮೋ ಭೇಟಿ ಮಾಡಿದ್ದಾರೆ.
ಪ್ರಧಾನಿ ಮೋದಿಯವರನ್ನು ಸೌಜನ್ಯದ ಭೇಟಿ ಮಾಡಿದ್ದು, ಈ ವೇಳೆ ಮೂರು ವಿಚಾರಗಳ ಬಗ್ಗೆ ಮಾಹಿತಿ ಹಂಚಿಕೊಂಡಿರುವೆ. ಪ್ರಮುಖವಾಗಿ ಪಂಜಾಬ್ ರೈತರ ಭತ್ತ ಖರೀದಿ ಪ್ರಕ್ರಿಯೆ ಅಕ್ಟೋಬರ್ 10ರಿಂದ ಆರಂಭ ಮಾಡಲು ಕೇಂದ್ರ ನಿರ್ಧರಿಸಿದ್ದು, ಇಂದಿನಿಂದಲೇ ಈ ಪ್ರಕ್ರಿಯೆಗೆ ಚಾಲನೆ ನೀಡುವಂತೆ ಮನವಿ ಮಾಡಿದ್ದೇನೆ ಎಂದರು. ಇದಾದ ಬಳಿಕ ಕೋವಿಡ್ನಿಂದ ಬಂದ್ ಆಗಿರುವ ಕರ್ತಾರ್ಪುರ್ ಕಾರಿಡಾರ್ ತೆರೆಯುವಂತೆ ಕೋರಿದ್ದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ:ನಿರ್ಣಾಯಕ ಪಂದ್ಯದಲ್ಲಿ ಕೋಲ್ಕತ್ತಾ-ಪಂಜಾಬ್ ಮುಖಾಮುಖಿ: ಟಾಸ್ ಗೆದ್ದು ಬೌಲಿಂಗ್ ಆಯ್ದ ರಾಹುಲ್
ನವದೆಹಲಿಯಲ್ಲಿರುವ ಚರಣ್ಜಿತ್ ಸಿಂಗ್ ಚನ್ನಿ ಇದೀಗ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರ ಭೇಟಿ ಮಾಡಲಿದ್ದು, ಈ ವೇಳೆ ರಾಜ್ಯದಲ್ಲಿನ ಕಾಂಗ್ರೆಸ್ ಬಿಕ್ಕಟ್ಟಿನ ವಿಚಾರವಾಗಿ ಮಾತುಕತೆ ನಡೆಸುವ ಸಾಧ್ಯತೆ ಇದೆ. ಪಂಜಾಬ್ನಲ್ಲಿ ಮುಂದಿನ ವರ್ಷವೇ ವಿಧಾನಸಭೆ ಚುನಾವಣೆ ನಡೆಯಲಿರುವ ಕಾರಣ, ಯಾವೆಲ್ಲ ಕ್ರಮ ಕೈಗೊಳ್ಳಬೇಕು ಎಂಬುದರ ಕುರಿತಾಗಿ ಮಾತುಕತೆ ನಡೆಸಲಿದ್ದಾರೆ.