ಚಂಡೀಗಢ :ಪಂಜಾಬ್ ಸಿಎಂ ಚರಣಜಿತ್ ಸಿಂಗ್ ಚನ್ನಿ ಸಂಪುಟಕ್ಕೆ ಸೇರ್ಪಡೆಯಾಗುವ ಹೊಸ ಸಚಿವರ ಪಟ್ಟಿ ಬಹುತೇಕ ಅಂತಿಮವಾಗಿದೆ. ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಸಂಪುಟದಲ್ಲಿದ್ದ ಐವರನ್ನು ಕೈಬಿಡಲಾಗಿದೆ.
ಸಚಿವರ ಅಂತಿಮ ಪಟ್ಟಿಗೆ ರಾಹುಲ್ ಗಾಂಧಿ, ಎಐಸಿಸಿ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರ ಗ್ರೀನ್ ಸಿಗ್ನಲ್‌ಗಾಗಿ ಕಾಯುತ್ತಿದ್ದಾರೆ. ಸಣ್ಣಪುಟ್ಟ ಬದಲಾವಣೆಗಳೊಂದಿಗೆ ಇಂದು ಸಂಜೆಯೊಳಗೆ ಹೈಕಮಾಂಡ್ ಅನುಮತಿ ನೀಡಿದರೆ ನಾಳೆ ಸಂಜೆ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಯಾರನ್ನು ಸಚಿವರನ್ನಾಗಿ ಮಾಡಬೇಕು ಎಂಬುದರ ಬಗ್ಗೆ ಚರ್ಚಿಸಲು ನಿನ್ನೆ ನಡೆದ ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ಹರೀಶ್ ರಾವತ್, ಹರೀಶ್ ಚೌಧರಿ ಮತ್ತು ಅಜಯ್ ಮಾಕೇನ್ ಭಾಗವಹಿಸಿದ್ದರು.
ಮಾಜಿ ಆರೋಗ್ಯ ಸಚಿವ ಬಲಬೀರ್ ಸಿಧು, ಕಂದಾಯ ಸಚಿವ ಗುರುಪ್ರೀತ್ ಸಿಂಗ್ ಕಾಂಗಾರ್, ಕೈಗಾರಿಕಾ ಸಚಿವ ಸುಂದರ್ ಶಾಮ್ ಅರೋರಾ, ಸಮಾಜ ಕಲ್ಯಾಣ ಸಚಿವ ಸಾಧು ಸಿಂಗ್ ಧರ್ಮಸೋಟ್ ಹಾಗೂ ಕ್ರೀಡಾ ಸಚಿವ ರಾಣಾ ಗುರ್ಮಿತ್ ಸಿಂಗ್ ಸೋಧಿ ಅವರ ಸಂಪುಟದಿಂದ ಕೈ ಬಿಡುವುದಕ್ಕೆ ಬಹುತೇಕರು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ನೀರಾವರಿ ಮಾಜಿಸಚಿವ ರಾಣಾ ಗುರ್ಜಿತ್ ಸಿಂಗ್ ಅವರನ್ನು ಮರಳಿ ಸಂಪುಟಕ್ಕೆ ಸೇರ್ಪಡೆ ಮಾಡುವ ಬಗ್ಗೆ ಕಾಂಗ್ರೆಸ್ ಚಿಂತನೆ ನಡೆಸಿದೆ. ಗಣಿ ಹಗರಣದ ಆರೋಪ ಬಂದ ಮೇಲೆ ರಾಣಾ ಗುರ್ಜಿತ್ ಸಿಂಗ್ ಅವರು ಅಮರೀಂದರ್ ಅವರ ಸಂಪುಟದಲ್ಲಿ ರಾಜೀನಾಮೆ ನೀಡಿದ್ದರು.
ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಬಣದ ಪಿಪಿಸಿಸಿ ಪ್ರಧಾನ ಕಾರ್ಯದರ್ಶಿ ಪರ್ಗತ್ ಸಿಂಗ್, ಪಿಪಿಸಿಸಿ ಕಾರ್ಯಾಧ್ಯಕ್ಷ, ಕುಲ್ಜಿತ್ ನಾಗ್ರಾ ಹಾಗೂ ಶಾಸಕ ಅಮರೀಂದರ್ ಸಿಂಗ್ ರಾಜಾ ವಾರಿಂಗ್ ನೂತನ ಸಚಿವರ ಪಟ್ಟಿಯಲ್ಲಿದ್ದಾರೆ. ಡಾ ರಾಜ್ ಕುಮಾರ್ ವರ್ಕಾ, ಪಿಪಿಸಿಸಿ ಕಾರ್ಯಾಧ್ಯಕ್ಷ ಸಂಗತ್ ಸಿಂಗ್ ಗಿಲ್ಜಿಯಾನ್ ಹಾಗೂ ಗುರು ಕೀರ್ತ್ ಕೋಟ್ಲಿ ಸಚಿವರ ಪಟ್ಟಿಯಲ್ಲಿನ ಇತರೆ ಹೊಸ ಮುಖಗಳು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ವಿದ್ಯುತ್, ನೀರು ಬಾಕಿ ಸಂಪೂರ್ಣ ಮನ್ನಾ ಮಾಡಿ ನಾನೇ 'ಆಮ್ ಆದ್ಮಿ' ಎಂದ ಚನ್ನಿ: ಅಮರೀಂದರ್ ಸಿಂಗ್ ಆಪ್ತ ಅಧಿಕಾರಿಗಳಿಗೂ ಗೇಟ್‌ಪಾಸ್!