ಚಂಡೀಗಢ(ಪಂಜಾಬ್): ಪಂಜಾಬ್ನಲ್ಲಿ ಭಗವಂತ್ ಮಾನ್ ನೇತೃತ್ವದ ನೂತನ ಆಮ್ ಆದ್ಮಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಕಳೆದ ಮೂರು ದಿನಗಳ ಹಿಂದೆ 10 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದೀಗ ಲಭ್ಯವಾಗಿರುವ ಮಾಹಿತಿ ಪ್ರಕಾರ, ಮುಖ್ಯಮಂತ್ರಿಯೂ ಸೇರಿದಂತೆ ಸಚಿವ ಸಂಪುಟದ ಎಲ್ಲ ಸದಸ್ಯರ ಮೇಲೂ ಅಪರಾಧ ಪ್ರಕರಣಗಳಿವೆ.
ಹೊಸದಾಗಿ ಸಚಿವರಾಗಿರುವ ನಾಲ್ವರು ಗಂಭೀರ ಸ್ವರೂಪದ ಕ್ರಿಮಿನಲ್ ಪ್ರಕರಣ ಎದುರಿಸುತ್ತಿದ್ದರೆ, ಉಳಿದವರ ಮೇಲೆ ಇತರೆ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ತಿಳಿಸಿದೆ.
ಉಳಿದಂತೆ, 11 ಸಚಿವರಲ್ಲಿ 9 ಮಂದಿ ಕೋಟ್ಯಧಿಪತಿಗಳಾಗಿದ್ದು, ಅವರ ಸರಾಸರಿ ಆಸ್ತಿ 2.87 ಕೋಟಿ ರೂ ಮೌಲ್ಯದ್ದಾಗಿದೆ. ಹೋಶಿಯಾರ್ಪುರದ ಬ್ರಾಮಾ ಶಂಕರ್ ಅತಿ ಹೆಚ್ಚು 8.56 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ.
ಇದನ್ನೂ ಓದಿ:ಮಾನ್ ಕ್ಯಾಬಿನೆಟ್ನಲ್ಲಿ ಇಬ್ಬರು ಡಾಕ್ಟರ್, ಮೂವರು ಹಿಂದೂ.. 8 ಮಂದಿ ಶಾಸಕರಿಗೆ ಮೊದಲ ಸಲವೇ ಬಂಪರ್!
ಪಂಜಾಬ್ ನೂತನ ಕ್ಯಾಬಿನೆಟ್ನಲ್ಲಿ ನಾಲ್ವರು ಜಾಟ್ ಸಿಖ್ಖರಿದ್ದು, ಮೂವರು ಹಿಂದೂಗಳು, ಸಿಎಂ ಸೇರಿದಂತೆ ನಾಲ್ವರು ದಲಿತರು ಇದ್ದಾರೆ. ವಿಶೇಷವೆಂದರೆ ಇಬ್ಬರು ವೈದ್ಯರು ಹಾಗೂ ಓರ್ವ ನಿವೃತ್ತ ಅಧಿಕಾರಿ ಕೂಡ ಸಚಿವ ಸ್ಥಾನ ಪಡೆದಿದ್ದಾರೆ. ಪಂಜಾಬ್ ಸಂಪುಟದಲ್ಲಿ ಏಕೈಕ ಮಹಿಳೆಗೆ ಸಚಿವ ಸ್ಥಾನ ಒಲಿದಿದ್ದು, ಡಾ. ಬಲ್ಜಿತ್ ಕೌರ್ಗೆ ಮಣೆ ಹಾಕಲಾಗಿದೆ. ಇವರು ವೃತ್ತಿಯಲ್ಲಿ ವೈದ್ಯೆಯಾಗಿದ್ದು, ಕಳೆದ 18 ವರ್ಷಗಳಿಂದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ.
ಭಗವಂತ್ ಮಾನ್ ಕ್ಯಾಬಿನೆಟ್ನಲ್ಲಿ ಹರ್ಪಲ್ ಸಿಂಗ್ ಚೀಮಾ, ಡಾ.ಬಲ್ಜಿತ್ ಕೌರ್, ಹರ್ಭಜನ್ ಸಿಂಗ್ ಇಟಿಒ, ಡಾ.ವಿಯಜ್ ಸಿಂಗ್ಲಾ, ಗರ್ಮಿರ್ ಸಿಂಗ್, ಹರ್ಜೋತ್ ಸಿಂಗ್, ಲಾಲ್ ಚಂದ್, ಕುಲ್ದೀಪ್ ಸಿಂಗ್ ಧಲಿವಾಲ್, ಲಾಲ್ಜಿತ್ ಸಿಂಗ್ ಭುಲ್ಲಾರ್, ಭ್ರಮ್ ಶಂಕರ್ ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.
ಕಳೆದ ಕೆಲ ವಾರಗಳ ಹಿಂದೆ ನಡೆದ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ 92 ಸ್ಥಾನಗಳಲ್ಲಿ ಗೆಲುವು ದಾಖಲಿಸಿದ್ದು ಸರ್ಕಾರ ರಚನೆ ಮಾಡಿದೆ.