ಚಂಡೀಗಢ: 2022ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಹಿನ್ನಡೆ ಅನುಭವಿಸಿದ ಬಳಿಕ, ಮುಂದಿನ 2024ರ ಲೋಕಸಭೆ ಚುನಾವಣೆಯಲ್ಲಾದರೂ ಸಾಧ್ಯವಾದಷ್ಟು ಗರಿಷ್ಠ ಸ್ಥಾನಗಳನ್ನು ತಾನೂ ಗೆಲ್ಲಲೇಬೇಕು ಎಂದು ಹೊಸ ತಂತ್ರಗಳನ್ನು ರೂಪಿಸುವ ಚಿಂತನೆಯಲ್ಲಿ ತೊಡಗಿದೆ.
ಮಾಲ್ವಾ ಪ್ರದೇಶದ ಮೇಲೆ ಬಿಜೆಪಿ ಕಣ್ಣು: ಪಂಜಾಬ್‌ನ ಆಡಳಿತಾತ್ಮಕ ಅನುಕೂಲವಾಗಿ ಮಾಲ್ವಾ, ಮಾಜಾ ಮತ್ತು ದೋಬಾ ಎಂಬ ಮೂರು ಪ್ರದೇಶಗಳಾಗಿ ವಿಂಗಡಿಸಲಾಗಿದೆ. ಈ ಮಾಲ್ವಾ ಪ್ರದೇಶವು ಹೆಚ್ಚು ಲೋಕಸಭಾ ಸ್ಥಾನಗಳನ್ನು ಹೊಂದಿದೆ. ಏಳು ಲೋಕಸಭೆ ಕ್ಷೇತ್ರಗಳಾದ ಸಂಗ್ರೂರ್, ಫತೇಘರ್ ಸಾಹಿಬ್, ಪಟಿಯಾಲ, ಲುಧಿಯಾನ, ಬಟಿಂಡಾ, ಫರೀದ್‌ಕೋಟ್ ಮತ್ತು ಫಿರೋಜ್‌ಪುರದಲ್ಲಿ ಕಮಲ ಅರಳಿಸಲು ಬಿಜೆಪಿ ತಂತ್ರ ಹೆಣೆಯುತ್ತಿದೆ.
ಈ ಪ್ರದೇಶದಲ್ಲಿ ಪಂಜಾಬ ರಾಜ್ಯದ 69 ವಿಧಾನಸಭೆಯ ಸ್ಥಾನಗಳಿವೆ. ಮಾಲ್ವಾದ ಪ್ರಾಮುಖ್ಯತೆಯನ್ನು ಪರಿಗಣಿಸಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಜನವರಿ 29 ರಂದು ಮೊದಲ ಬಾರಿಗೆ ಪಟಿಯಾಲಕ್ಕೆ ಆಗಮಿಸುತ್ತಿದ್ದಾರೆ. ಪಂಜಾಬ್‌ನ 13 ಲೋಕಸಭೆ ಸ್ಥಾನಗಳಲ್ಲಿ ಬಹುತೇಕ ಮಾಲ್ವಾ ಪ್ರದೇಶವು 7 ಸ್ಥಾನಗಳನ್ನು ಹೊಂದಿದೆ. ಭಾರತೀಯ ಜನತಾ ಪಕ್ಷವು (ಬಿಜೆಪಿ) ಕಾಂಗ್ರೆಸ್ ಮತ್ತು ಇತರ ಪಕ್ಷಗಳನ್ನು ತೊರೆದು ಬಂದು ಪಕ್ಷಕ್ಕೆ ಸೇರ್ಪಡೆಗೊಂಡ ರಾಜಕೀಯ ಪ್ರಮುಖರ ಸಹಾಯದಿಂದ ಮಾಲ್ವಾದಲ್ಲಿ ಬಹುಪಾಲು ಸ್ಥಾನಗಳನ್ನು ಗೆಲ್ಲುವ ಉದ್ದೇಶವನ್ನು ಬಿಜೆಪಿ ಇಟ್ಟುಕೊಂಡಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಮತ್ತು ಬಿಜೆಪಿ ಹಿರಿಯ ನಾಯಕರು ಮಿಷನ್ 2024 ರ ಚುನಾವಣೆಯ ಭಾಗವಾಗಿ ಮಾಲ್ವಾ ಮತ್ತು ಪಂಜಾಬ್‌ನ ಇತರ ಪ್ರಮುಖ ಸ್ಥಳಗಳಿಗೆ ಭೇಟಿ ನೀಡುವ ನಿರೀಕ್ಷೆಯಿದೆ. ಮಜಾ ಪ್ರದೇಶವು ಪಾಕಿಸ್ತಾನದ ಗಡಿಯಲ್ಲಿದೆ. ಇದು ಪಠಾಣ್‌ಕೋಟ್, ಅಮೃತಸರ, ತರ್ನ್ ತರಣ್ ಮತ್ತು ಗುರುದಾಸ್‌ಪುರ 4 ಜಿಲ್ಲೆಗಳನ್ನು ಹೊಂದಿದೆ. ಪ್ರಸ್ತುತ ಗುರುದಾಸ್‌ಪುರ ಕ್ಷೇತ್ರವನ್ನು ಬಿಜೆಪಿ ತನ್ನ ತೆಕ್ಕೆಗೆ ಪಡೆದಿದೆ. ದೋಬ್ ಪ್ರದೇಶವು ಸಟ್ಲೆಜ್ ಮತ್ತು ಬಿಯಾಸ್ ನದಿಗಳ ನಡುವೆ ಇದೆ. ಎನ್‌ಆರ್‌ಐ ಮತ್ತು ದಲಿತ ಮತಬ್ಯಾಂಕ್ ಹೇರಳವಾಗಿದ್ದು, ಇದರಿಂದ ಈ ಕ್ಷೇತ್ರ ಮಹತ್ವದ್ದಾಗಿದೆ. ಪ್ರಸ್ತುತ ಬಿಜೆಪಿಯ ಕೇಂದ್ರ ಸಚಿವ ಸೋಂಪ್ರಕಾಶ್ ಅವರು ಬಿಜೆಪಿ ಭದ್ರಕೋಟೆ ಆಗಿರುವ ಹೋಶಿಯಾರ್‌ಪುರದವರು.