ನವದೆಹಲಿ:ಫೆಬ್ರವರಿ 14ರಂದು ಘೋಷಣೆಯಾಗಿದ್ದ ಪಂಜಾಬ್ ವಿಧಾನಸಭೆ ಚುನಾವಣೆ ಮುಂದೂಡಿಕೆಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗ ಮಹತ್ವದ ಪ್ರಕಟಣೆ ಹೊರಡಿಸಿದೆ.
ಇದೀಗ ಹೊರಬಿದ್ದಿರುವ ಮಾಹಿತಿ ಪ್ರಕಾರ, ಫೆ.20ರಂದು ಮತದಾನ ನಡೆಸಲು ನಿರ್ಧರಿಸಲಾಗಿದೆ. ಹೀಗಾಗಿ ಎಲ್ಲ 117 ವಿಧಾನಸಭೆ ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.
ಚುನಾವಣೆ ಮುಂದೂಡಿದ್ದು ಏಕೆ?
ರಾಜ್ಯದಲ್ಲಿ ಗುರು ರವಿದಾಸ್ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡುವಂತೆ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು. ಈ ಬಗ್ಗೆ ಬಿಜೆಪಿ ಹಾಗೂ ಶಿರೋಮಣಿ ಅಕಾಲಿ ದಳ ಕೂಡ ಮನವಿ ಮಾಡಿದ್ದವು.
ಪಂಜಾಬ್ನಲ್ಲಿ ಶೇ. 32ಕ್ಕೂ ಅಧಿಕ ಪರಿಶಿಷ್ಠ ಜಾತಿ ಸಮುದಾಯದವರಿದ್ದು, ಎಲ್ಲರೂ ಗುರು ರವಿದಾಸ್ ಅವರ ಜನ್ಮದಿನದ ಪ್ರಯುಕ್ತ ಉತ್ತರ ಪ್ರದೇಶದ ಬನಾರಸ್ಗೆ ಭೇಟಿ ನೀಡಿ ಜಯಂತಿಯಲ್ಲಿ ಭಾಗಿಯಾಗುತ್ತಾರೆ. ಇದೇ ಕಾರಣಕ್ಕಾಗಿ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಲು ಸಾಧ್ಯವಾಗುವುದಿಲ್ಲ. ಹಾಗಾಗಿ, ಚುನಾವಣೆ ದಿನಾಂಕವನ್ನು ಮುಂದೂಡುವಂತೆ ಒತ್ತಾಯಿಸಲಾಗಿತ್ತು.
ಈ ಹಿಂದೆ ಫೆ. 14ರಂದು ಗೋವಾ, ಉತ್ತರಾಖಂಡ ಹಾಗೂ ಪಂಜಾಬ್ನಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಸಲು ಆಯೋಗ ನಿರ್ಧರಿಸಿತ್ತು.