ಪುಣೆ: 28 ವರ್ಷದ ಮಹಿಳೆಯೊಬ್ಬರ ಮೇಲೆ ವಾಮಾಚಾರದ ಕೃತ್ಯಗಳನ್ನು ಮಾಡಿದ ಆರೋಪದ ಮೇಲೆ ಇಲ್ಲಿನ ಸಿಂಹಗಢ ಪೊಲೀಸರು 8 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಗರ್ಭಿಣಿಯಾಗಲು ಹಾಗೂ ಆ ಮೂಲಕ ಮನೆಗೆ ಸಮೃದ್ಧಿ ತರುವಂತಾಗಲು ಮಾನವ ಚಿತಾಭಸ್ಮ ಸೇವಿಸುವಂತೆ ಮಾಡಿದ್ದಾರೆ ಎಂದು ವಾಮಾಚಾರ ಸಂತ್ರಸ್ತ ಮಹಿಳೆ ಪತಿ ಹಾಗೂ ಆತನ ಕುಟುಂಬಸ್ಥರ ವಿರುದ್ಧ ದೂರು ದಾಖಲಿಸಿದ್ದಾರೆ.
ಪುಣೆಯ ಧೈರಿ ಪ್ರದೇಶದಲ್ಲಿ ಈ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ. ಮಹಿಳೆಗೆ ಕಳೆದ ಮೂರು ವರ್ಷಗಳಿಂದ ಆಕೆಯ ಕುಟುಂಬದವರು ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ತಿಳಿದು ಬಂದಿದೆ. ಆರೋಪಿ ಕುಟುಂಬಸ್ಥರು ಸಂತ್ರಸ್ತೆಗೆ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮದುವೆಯಾದ ಹಲವು ತಿಂಗಳ ನಂತರ ಮಹಿಳೆ ಮಗುವನ್ನು ಹೆರಲು ವಿಫಲವಾದಾಗ ದೌರ್ಜನ್ಯ ತೀವ್ರಗೊಂಡಿತು ಎಂದು ಪ್ರಕರಣದ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಮಕ್ಕಳಿಗಾಗಿ ವಾಮಾಚಾರಕ್ಕೆ ಮೊರೆ:ಮಹಿಳೆಗೆ ಮಕ್ಕಳಾಗದಿದ್ದಾಗ ಕುಟುಂಬಸ್ಥರು ವಾಮಾಚಾರಾದ ಮೊರೆ ಹೋಗಿದ್ದಾರೆ. ಮಾನವ ಮತ್ತು ಪ್ರಾಣಿಗಳ ಬಲಿಗಳನ್ನು ಒಳಗೊಂಡ ಅಘೋರಿ ಪೂಜೆಗಳನ್ನು ಮಹಿಳೆಯ ಮೇಲೆ ಮಾಡಲಾರಂಭಿಸಿದ್ದಾರೆ. ಕೆಲ ದಿನಗಳ ಹಿಂದೆ ಮನೆಯವರು ಇದೇ ರೀತಿಯ ವಿಧಿ ವಿಧಾನ ನಡೆಸಿದ್ದರು ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಆಚರಣೆ ಆಡು ಮತ್ತು ಕೋಳಿಗಳ ಬಲಿ ಒಳಗೊಂಡಿರುತ್ತದೆ. ಈ ವಾಮಾಚಾರದ ಕೊನೆಯಲ್ಲಿ ಮಾನವ ಚಿತಾಭಸ್ಮ ಸೇವಿಸುವಂತೆ ಸಂತ್ರಸ್ತೆಗೆ ಒತ್ತಾಯಿಸಲಾಯಿತು. ಈ ಎಲ್ಲ ಸಂಕಷ್ಟಗಳನ್ನು ಎದುರಿಸಿ ರೋಸಿ ಹೋದ ಮಹಿಳೆ ಕೊನೆಗೆ ಸಿಂಹಗಢ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.