ಪುಣೆ, ಮಹಾರಾಷ್ಟ್ರ:ಕೆಲವು ತಿಂಗಳ ಹಿಂದೆ ಟೊಮೆಟೊಗೆ ಬೆಲೆ ಸಿಗದೇ ಅನೇಕ ರೈತರು ತಮ್ಮ ಬೆಳೆಯನ್ನು ಬೀದಿಗೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದರು. ಅಂತಹ ಪರಿಸ್ಥಿತಿ ಈಗ ಉಲ್ಟಾ ಆಗಿದೆ. ಟೊಮೆಟೊಗೆ ಬಂಗಾರದ ಬೆಲೆ ಬಂದಿದೆ. ಕಳೆದ ಎರಡು ತಿಂಗಳಿಂದ ಟೊಮೆಟೊಗೆ ಎಲ್ಲಿಲದ ಬೇಡಿಕೆ ಸೃಷ್ಟಿಯಾಗಿದೆ. ಹಾಗಾಗಿ, ಒಂದೆಡೆ ಸಾಮಾನ್ಯ ನಾಗರಿಕರು ಟೊಮೆಟೊವನ್ನು ಬಹಳ ಎಚ್ಚರಿಕೆಯಿಂದ ಬಳಸುತ್ತಿದ್ದಾರೆ. ಇನ್ನೊಂದೆಡೆ ಟೊಮೆಟೊ ಬೆಳೆಯಿಂದ ಹಲವು ರೈತರು ಲಕ್ಷಾಧಿಪತಿಗಳಾಗಿದ್ದಾರೆ.
ಪುಣೆ ಜಿಲ್ಲೆಯ ಜುನ್ನಾರ್ ತಾಲೂಕಿನ ಹಲವು ರೈತರು ಟೊಮೆಟೊ ಬೆಳೆದು ಉತ್ತಮ ಇಳುವರಿ ಪಡೆದಿದ್ದಾರೆ. ಖೇಡ್ ತಾಲೂಕಿನ ರೈತ ದಂಪತಿ ಅರವಿಂದ ಮಂಜರೆ ಕೇವಲ ಒಂದು ಎಕರೆಯಲ್ಲಿ ಟೊಮೆಟೊ ಬೆಳೆದು 15 ಲಕ್ಷ ಆದಾಯ ಗಳಿಸಿದ್ದಾರೆ. ಈ ಮೂಲಕ ಈ ರೈತ ದಂಪತಿ ಇತರ ರೈತರಿಗೆ ಮಾದರಿಯಾಗಿದ್ದಾರೆ.
ಟೊಮೆಟೊ ಬೆಲೆ ದಿಢೀರ್ ಏರಿಕೆ:ಖೇಡ್ ತಾಲೂಕಿನ ಮಾಂಜ್ರೇವಾಡಿಯಲ್ಲಿ ವಾಸವಾಗಿರುವ ಈ ರೈತ ದಂಪತಿ ಲಾಭ ಗಳಿಸುವ ಉದ್ದೇಶದಿಂದ ಒಂದು ಎಕರೆಯಲ್ಲಿ ಟೊಮೆಟೊ ನಾಟಿ ಮಾಡಿದ್ದರು. ಟೊಮೆಟೊ ಮಾರಾಟ ಆರಂಭವಾದಾಗ ಟೊಮೆಟೊ ಕೆಜಿಗೆ ಎರಡರಿಂದ ಮೂರು ರೂಪಾಯಿಗೆ ಮಾರಾಟವಾಗುತ್ತಿತ್ತು. ಆದರೆ, ಈ ದಂಪತಿ ಬೆಲೆ ಬಗ್ಗೆ ಯೋಚಿಸದೇ ಟೊಮೆಟೊ ಹಾಕಿದ್ದಾರೆ. ಆರಂಭದಲ್ಲಿ, ಅವರು ಕಡಿಮೆ ಬೆಲೆಯನ್ನು ಪಡೆದರು. ಆದರೆ, ಏಕಾಏಕಿ ಟೊಮೆಟೊ ಬೆಲೆ ಏರಿದ್ದು, ದಂಪತಿಯ ಶ್ರಮಕ್ಕೆ ತಕ್ಕ ಫಲ ಸಿಕ್ಕಂತಾಗಿದೆ.
1500 ಬಾಕ್ಸ್ನಿಂದ 15 ಲಕ್ಷ ಆದಾಯ :ಒಂದು ಎಕರೆ ಟೊಮೆಟೊಗೆ ಸುಮಾರು 5 ಲಕ್ಷ ರೂಪಾಯಿ ಸಂಪಾದಿಸಿದ್ದರು. ಮೊದಲಿಗೆ ಒಂದು ಬಾಕ್ಸ್ ಬೆಲೆ 250 ರೂಪಾಯಿಗೆ ಮಾರಾಟವಾಗುತ್ತಿತ್ತು. ನಂತರ ಅದೃಷ್ಟ ಎಂಬಂತೆ ಟೊಮೆಟೊವನ್ನು ಬಾಕ್ಸ್ವೊಂದಕ್ಕೆ ಸುಮಾರು 2000 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಈಗ ಆ ದಂಪತಿ 1500 ಬಾಕ್ಸ್ಗಳಿಂದ ಸುಮಾರು 15 ಲಕ್ಷ ಗಳಿಸಿದ್ದಾರೆ. ಆದರೆ ಆ ದಂಪತಿಯ ಟೊಮೆಟೊ ವ್ಯಾಪಾರ ಇನ್ನು ನಿಂತಿಲ್ಲ. ಬೆಲೆ ಏರಿಕೆಯ ನಂತರ, ಆರಂಭದಲ್ಲಿ ಒಂದು ಕ್ಯಾರೆಟ್ 1500 ರಿಂದ 1700 ರೂಪಾಯಿಗೆ ಸೇಲ್ ಆಗ್ತಿರುವುದರಿಂದ ಆ ದಂಪತಿ ಇನ್ನಷ್ಟು ಲಾಭ ಗಳಿಸುವ ನಿರೀಕ್ಷೆಯಿದೆ.
ನನ್ನ ಪತ್ನಿ ನೀಡಿದ ಬೆಂಬಲ ಅತ್ಯಮೂಲ್ಯ: ರೈತ ಅರವಿಂದ ಮಂಜರೆ ಮಾತನಾಡಿ, ಏಪ್ರಿಲ್ ತಿಂಗಳ ಆರಂಭದಲ್ಲಿ ಒಂದು ಎಕರೆ ಜಮೀನಿನಲ್ಲಿ ಆರು ಸಾವಿರ ರೂಪಾಯಿ ಖರ್ಚು ಮಾಡಿ ಟೊಮೆಟೊ ಹಾಕಿದ್ದೆ. ಮುಂದಿನ ಮಾರುಕಟ್ಟೆ ಬೆಲೆಯನ್ನು ಪರಿಗಣಿಸಿ ಟೊಮೆಟೊ ಬೆಳೆಯಲು ನಿರ್ಧರಿಸಿದ್ದೆ. ಆಗ ಕೆಲವೇ ರೈತರು ಟೊಮೆಟೊ ಬೆಳೆದಿದ್ದರು. ಆರಂಭದಲ್ಲಿ ಕಡಿಮೆ ಬೆಲೆಯಿದ್ದರೂ ಇಂದು ಟೊಮೆಟೊ ಬೆಳೆಗೆ ನಾಲ್ಕು ಪಟ್ಟು ಹಣ ಬಂದಿದೆ. ಪತ್ನಿಯ ಬೆಂಬಲ ಅತ್ಯಮೂಲ್ಯವಾಗಿದೆ ಎಂದರು.
ಸಾಮಾನ್ಯ ರೈತ ಕುಟುಂಬ ದಂಪತಿ ಇಂದು ಲಕ್ಷಾಧಿಪತಿಗಳಾಗುತ್ತಿದ್ದಂತೆ ಅವರ ಮುಖದಲ್ಲಿ ಸಂತಸ ಕಾಣುತ್ತಿತ್ತು. ಕೆಂಪು ಸುಂದರಿ ಆ ದಂಪತಿಯ ಕೈ ಬಿಡಲಿಲ್ಲ.
ಓದಿ:Tomato: 12 ಎಕರೆಯಲ್ಲಿ ಟೊಮೆಟೊ ಬೆಳೆದು ₹40 ಲಕ್ಷ ಆದಾಯ; ಚಾಮರಾಜನಗರ ಸಹೋದರರ ಕೃಷಿಖುಷಿ