ಕರ್ನಾಟಕ

karnataka

ETV Bharat / bharat

ಹನಿಟ್ರ್ಯಾಪ್‌ ಬಲೆಗೆ ಬಿದ್ದು ಪಾಕ್​ಗೆ ಗೌಪ್ಯ ಮಾಹಿತಿ ಹಂಚಿಕೆ ಆರೋಪ: ವಿಜ್ಞಾನಿ ಕುರುಲ್ಕರ್ ಬಗ್ಗೆ ಹೊಸ ಮಾಹಿತಿ ಬಹಿರಂಗ

ಪಾಕಿಸ್ತಾನಕ್ಕೆ ಗೌಪ್ಯ ಮಾಹಿತಿ ಹಂಚಿಕೆ ಆರೋಪದಡಿ ಬಂಧಿತರಾದ ಡಿಆರ್‌ಡಿಒ ಹಿರಿಯ ವಿಜ್ಞಾನಿ ಪ್ರದೀಪ್ ಕುರುಲ್ಕರ್ ಬಗ್ಗೆ ಮಹಾರಾಷ್ಟ್ರದ ಭಯೋತ್ಪಾದನೆ ನಿಗ್ರಹ ದಳ ತನಿಖೆ ನಡೆಸುತ್ತಿದೆ.

Pradeep Kurulkar
ವಿಜ್ಞಾನಿ ಪ್ರದೀಪ್ ಕುರುಲ್ಕರ್

By

Published : May 12, 2023, 5:20 PM IST

ಪುಣೆ (ಮಹಾರಾಷ್ಟ್ರ): ಹನಿಟ್ರ್ಯಾಪ್‌ ಬಲೆಗೆ ಬಿದ್ದು ಪಾಕಿಸ್ತಾನಕ್ಕೆ ಗೌಪ್ಯ ಮಾಹಿತಿ ಹಂಚಿಕೆ ಆರೋಪದಡಿ ಬಂಧನಕ್ಕೆ ಒಳಗಾದ ಪುಣೆಯಲ್ಲಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಯ ನಿರ್ದೇಶಕ ಪ್ರದೀಪ್ ಕುರುಲ್ಕರ್ ಬಗ್ಗೆ ತನಿಖೆ ಚುರುಕುಗೊಂಡಿದೆ. ಈ ಬಗ್ಗೆ ಮಹಾರಾಷ್ಟ್ರದ ಭಯೋತ್ಪಾದನೆ ನಿಗ್ರಹ ದಳ (ಎ​ಟಿಎಸ್) ತನಿಖೆ ನಡೆಸುತ್ತಿದ್ದು, ಹೊಸ ಸಂಗತಿಗಳು ಬಹಿರಂಗವಾಗಿವೆ.

ಡಿಆರ್‌ಡಿಒ ಹಿರಿಯ ವಿಜ್ಞಾನಿಯಾಗಿರುವ ನಿರ್ದೇಶಕ ಪ್ರದೀಪ್ ಕುರುಲ್ಕರ್ ಹನಿಟ್ರ್ಯಾಪ್‌ನಲ್ಲಿ ಸಿಲುಕಿಸಿಕೊಂಡು​ ಪಾಕಿಸ್ತಾನಿ ಗುಪ್ತಚರ ಅಧಿಕಾರಿಗೆ ಗೌಪ್ಯ ಮಾಹಿತಿ ರವಾನಿಸಿರುವ ಶಂಕೆ ವ್ಯಕ್ತಯಾಗಿದೆ. ಈ ಸಂಬಂಧ ಮೇ 4ರಂದು ಎ​ಟಿಎಸ್ ಪೊಲೀಸರು ಬಂಧಿಸಿದ್ದಾರೆ. ಆ ನಂತರ ಪುಣೆಯ ಶಿವಾಜಿ ನಗರದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಮೊದಲಿಗೆ ಮೇ 9ರವರೆಗೆ ಟಿಎಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು. ಇದೀಗ ಮೇ 15ರವರೆಗೆ ಎಟಿಎಸ್ ಕಸ್ಟಡಿಗೆ ನೀಡಲಾಗಿದ್ದು, ಹೆಚ್ಚಿನ ವಿಚಾರಣೆ ಕೈಗೊಳ್ಳಲಾಗುತ್ತಿದೆ.

ಇ-ಮೇಲ್ ಮೂಲಕ ಸಂಪರ್ಕ:ಮತ್ತೊಂದೆಡೆ, ಬಂಧಿತ ಕುರುಲ್ಕರ್ ಮೊಬೈಲ್​ ಮತ್ತು ಲ್ಯಾಪ್‌ಟಾಪ್​ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದ್ದು, ಇದರ ವರದಿ ಸಹ ಬಹಿರಂಗವಾಗಿದೆ. ಹನಿಟ್ರ್ಯಾಪ್‌ ಸಂದರ್ಭದಲ್ಲಿ ಕುರುಲ್ಕರ್ ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್, ಫೇಸ್‌ಬುಕ್‌ ಮೂಲಕ ಸಂವಹನ ನಡೆಸುತ್ತಿದ್ದರು. ಅಲ್ಲದೇ, ಇ-ಮೇಲ್ ಮೂಲಕ ಕೂಡ ಪಾಕಿಸ್ತಾನದ ಗುಪ್ತಚರರೊಂದಿಗೆ ಸಂಪರ್ಕದಲ್ಲಿದ್ದರು ಎಂದು ವರದಿಯಲ್ಲಿ ಬೆಳಕಿಗೆ ಬಂದಿದೆ.

ಮಹಿಳೆ ಭೇಟಿ ಬಗ್ಗೆ ತನಿಖೆ:ಈ ಹಿಂದಿನ ವಿಚಾರಣೆಯಲ್ಲಿ ಪ್ರದೀಪ್ ಕುರಾಳ್ಕರ್ ಡಿಆರ್​ಡಿಒ ಅತಿಥಿ ಗೃಹದಲ್ಲಿ ಒಬ್ಬ ಮಹಿಳೆಯನ್ನು ಭೇಟಿ ಮಾಡಿರುವ ವಿಚಾರ ಎಟಿಎಸ್​ ಗಮನಕ್ಕೆ ಬಂದಿತ್ತು. ಹೀಗಾಗಿ ಆ ಮಹಿಳೆ ನಿಖರವಾಗಿ ಯಾರು?, ಈ ಮಹಿಳೆಯನ್ನು ಏಕೆ ಭೇಟಿಯಾದರು? ಇದರ ಹಿಂದಿನ ನಿಖರ ಕಾರಣ ಪತ್ತೆ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.

ಸರ್ಕಾರಿ ಪಾಸ್ ಪೋರ್ಟ್ ಬಳಕೆ: ಇನ್ನೊಂದು ಕುತೂಹಲಕಾರಿ ಅಂಶ ಎಂದರೆ ಕುರುಲ್ಕರ್ ಸರ್ಕಾರಿ ಪಾಸ್‌ಪೋರ್ಟ್​​ ಬಳಸಿ ಆರು ವಿದೇಶಗಳಿಗೆ ಭೇಟಿ ನೀಡಿದ್ದರು. ತಮ್ಮ ಪ್ರವಾಸದ ಸಂದರ್ಭದಲ್ಲಿ ಪಾಕಿಸ್ತಾನಿ ಗೂಢಚಾರರನ್ನು ಭೇಟಿಯಾಗಿರುವ ಶಂಕೆಯೂ ಇದೆ. ಹೀಗಾಗಿ ಈ ವೇಳೆ ಅವರು ಭೇಟಿಯಾಗಿದ್ದು ಯಾರನ್ನು?. ಯಾವ ಕಚೇರಿಯ ಗೌಪ್ಯ ಮಾಹಿತಿ ಹಂಚಿಕೊಂಡಿದ್ದಾರೆ?, ಅದಕ್ಕಾಗಿ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಲಾಗಿದೆಯೇ ಎಂಬ ಕುರಿತು ಎಟಿಎಸ್​ ತನಿಖೆ ನಡೆಸುತ್ತಿದೆ.

ಪ್ರದೀಪ್ ಕುರುಲ್ಕರ್ ಬಂಧನ ಕುರಿತಂತೆ ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ್ದ ಕಾಂಗ್ರೆಸ್ ವಕ್ತಾರ ಪವನ್ ಖೇರಾ, ಪ್ರದೀಪ್ ಕುರುಲ್ಕರ್ ಸಕ್ರಿಯ ಆರ್​ಎಸ್​​ಎಸ್ ನಾಯಕರಾಗಿದ್ದರು ಎಂದು ಆರೋಪಿಸಿದ್ದಾರೆ. ಡಿಆರ್‌ಡಿಒನ ಆರ್ ಮತ್ತು ಡಿ (ಎಂಜಿನಿಯರಿಂಗ್) ನಿರ್ದೇಶಕರಾಗಿ ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ ನಡೆಸಿದ್ದಕ್ಕಾಗಿ ಮಹಾರಾಷ್ಟ್ರದ ಎ​ಟಿಎಸ್ ಬಂಧಿಸಿದೆ. ಈ ಪ್ರಕರಣವು ರಾಷ್ಟ್ರೀಯವಾದಿ ಸಂಘಟನೆ ಎಂದು ಕರೆಯಲ್ಪಡುವ ಆರ್​ಎಸ್​​ಎಸ್​ನ ಸುಳ್ಳಿನ ಮುಖ ಮತ್ತು ರಾಷ್ಟ್ರ ವಿರೋಧಿ ಮುಖವನ್ನು ಬಹಿರಂಗಪಡಿಸಿದೆ ಎಂದು ದೂರಿದ್ದರು.

ಇದನ್ನೂ ಓದಿ:ಹನಿಟ್ರ್ಯಾಪ್​ ಬಲೆಗೆ ಬಿದ್ದು ಪಾಕ್​ಗೆ ಮಾಹಿತಿ ಸೋರಿಕೆ ಶಂಕೆ : ಡಿಆರ್​ಡಿಒ ನಿರ್ದೇಶಕನ ಬಂಧಿಸಿದ ಎಟಿಎಸ್​

ABOUT THE AUTHOR

...view details