ಪುಣೆ (ಮಹಾರಾಷ್ಟ್ರ): ಸಹಾಯಕ ಪೊಲೀಸ್ ಕಮಿಷನರ್ರೊಬ್ಬರು (ಎಸಿಪಿ) ತನ್ನ ಪತ್ನಿ ಮತ್ತು ಸೋದರಳಿಯನನ್ನು ಗುಂಡು ಹಾರಿಸಿ ಹತ್ಯೆಗೈದು ಬಳಿಕ ತಾವೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ (ಇಂದು) ಬೆಳಗ್ಗೆ 4 ಗಂಟೆಯ ಸುಮಾರಿಗೆ ಪುಣೆ ನಗರದಲ್ಲಿ ನಡೆದಿದೆ. ಪೊಲೀಸ್ ಸಹಾಯಕ ಕಮಿಷನರ್ ಭರತ್ ಗಾಯಕ್ವಾಡ್ (54), ಮೋನಿ ಗಾಯಕ್ವಾಡ್ (44) ಮತ್ತು ದೀಪಕ್ ಗಾಯಕ್ವಾಡ್ (35) ಮೃತರೆಂದು ಗುರುತಿಸಲಾಗಿದೆ.
ಭರತ್ ಗಾಯಕ್ವಾಡ್ ಅವರು ಅಮರಾವತಿ ಪೊಲೀಸ್ ಇಲಾಖೆಯಲ್ಲಿ ಸಹಾಯಕ ಕಮಿಷನರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕುಟುಂಬ ಪುಣೆಯಲ್ಲಿ ನೆಲೆಸಿತ್ತು. ಗಾಯಕ್ವಾಡ್ ಅವರ ಈ ನಿರ್ಧಾರಕ್ಕೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಭರತ್ ಗಾಯಕ್ವಾಡ್ ಅವರ ಕುಟುಂಬ ಪುಣೆಯ ಬಾಲೆವಾಡಿ ಪ್ರದೇಶದಲ್ಲಿ ವಾಸವಿತ್ತು. ಶನಿವಾರ ರಜೆಯ ಮೇಲೆ ಪುಣೆಗೆ ಆಗಮಿಸಿದ್ದರು ಎಂಬ ಮಾಹಿತಿ ದೊರೆತಿದೆ. ಇಂದು ಬೆಳಗಿನ ಜಾವ 3:30ರ ಹೊತ್ತಿಗೆ ಮೊದಲಿಗೆ ಪತ್ನಿಯ ತಲೆಗೆ ಗುಂಡು ಹಾರಿಸಿದ್ದಾರೆ. ಗುಂಡಿನ ಸದ್ದು ಕೇಳಿ ಪುತ್ರ ಹಾಗೂ ಸೋದರಳಿಯ ಓಡಿ ಬಂದಿದ್ದಾರೆ. ಕೋಣೆಯ ಬಾಗಿಲು ತೆರೆಯುತ್ತಿದ್ದಂತೆ ಸೋದರಳಿಯ ದೀಪಕ್ ಮೇಲೂ ಗುಂಡು ಹಾರಿಸಿದ್ದಾರೆ. ದೀಪಕ್ ಎದೆಗೆ ಗುಂಡು ತಗುಲಿದ್ದು ಅವರು ಸ್ಥಳದಲ್ಲೇ ಅಸುನೀಗಿದ್ದಾರೆ. ಇದಾದ ಬಳಿಕ ಗಾಯಕ್ವಾಡ್ ತಾನೂ ಕೂಡ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ವರದಿಯಲ್ಲಿ ತಿಳಿದು ಬಂದಿದೆ.