ಪುಣೆ (ಮಹಾರಾಷ್ಟ್ರ):ಪುಣೆ-ಸೊಲ್ಲಾಪುರ ಹೆದ್ದಾರಿಯ ಹಡಪ್ಸರ್ ಪ್ರದೇಶದಲ್ಲಿ 3 ಕೋಟಿ ರೂಪಾಯಿ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ಮಹತ್ವ ಪಡೆದಿದೆ.
ಹಡಪ್ಸರ್ ಪ್ರದೇಶದ ದ್ರಾಕ್ಷಿ ಸಂಶೋಧನಾ ಕೇಂದ್ರದ ಬಳಿ ಅಪರಾಧ ವಿಭಾಗದ ಸಹಾಯದಿಂದ ಪೊಲೀಸರು 3 ಕೋಟಿ 42 ಲಕ್ಷಕ್ಕೂ ಅಧಿಕ ಹಣವನ್ನು ಜಪ್ತಿ ಮಾಡಿದ್ದಾರೆ. ಹಣ ಎಣಿಕೆ ಯಂತ್ರಗಳನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣ ಸಂಬಂಧ ಕಾರ್ ಚಾಲಕ ಪ್ರಶಾಂತ ಧನಪಾಲ್ ಗಾಂಧಿ (47) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ.
ಮೂಲಗಳ ಪ್ರಕಾರ, "ಪುಣೆ ಪೊಲೀಸರು ಕಳೆದ ಕೆಲವು ದಿನಗಳಿಂದ ವಿವಿಧೆಡೆ ನಾಕಾಬಂದಿ ಹಾಕಿ ರಾತ್ರಿ ವೇಳೆ ವಾಹನಗಳನ್ನು ತಡೆದು ತಪಾಸಣೆ ನಡೆಸುತ್ತಿದ್ದಾರೆ. ಸೋಮವಾರ ರಾತ್ರಿ 11:30ರ ಸುಮಾರಿಗೆ ಹಡಪ್ಸರ್ ಪ್ರದೇಶದ ಶೆವಾಲೆವಾಡಿ ಪ್ರದೇಶದ ದ್ರಾಕ್ಷಿ ಸಂಶೋಧನಾ ಕೇಂದ್ರದ ಬಳಿ ಪೊಲೀಸರು ಶಂಕಿತ ವಾಹನವನ್ನು ಪರಿಶೀಲಿಸುತ್ತಿದ್ದರು. ಕಾರ್ನಲ್ಲಿದ್ದ ವ್ಯಕ್ತಿಯ ಚಲನವಲನದ ಬಗ್ಗೆ ಪೊಲೀಸರಿಗೆ ಅನುಮಾನ ಬಂದಿದೆ. ಕೂಡಲೇ ಡಿಕ್ಕಿ ತೆರೆದು ನೋಡಿದ್ದಾರೆ. ಅನುಮಾನಾಸ್ಪದವಾಗಿ ಕೆಲವು ಚೀಲಗಳು ಅಲ್ಲಿದ್ದವು. ಬ್ಯಾಗ್ ತೆರೆದು ನೋಡಿದಾಗ ನೋಟುಗಳ ಕಂತೆಗಳು ಸಿಕ್ಕಿವೆ. ಕಾರು ಸಮೇತ ಚಾಲಕನನ್ನು ಠಾಣೆಗೆ ಕರೆತರಲಾಯಿತು" ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.