ಪುಣೆ, ಮಹಾರಾಷ್ಟ್ರ :ಬಿಟ್ ಕಾಯಿನ್ ಸಂಬಂಧಿ ಅಪರಾಧಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಈಗ ಮಹಾರಾಷ್ಟ್ರದ ಪುಣೆಯಲ್ಲಿ ಇಂಥದ್ದೇ ಒಂದು ಘಟನೆ ನಡೆದಿದೆ. ಸುಮಾರು 300 ಕೋಟಿ ರೂಪಾಯಿ ಮೌಲ್ಯದ ಬಿಟ್‌ಕಾಯಿನ್ ಅನ್ನು ಸುಲಿಗೆ ಮಾಡಲು ವ್ಯಕ್ತಿಯೊಬ್ಬನನ್ನು ಅಪಹರಿಸಿದ ಆರೋಪದ ಮೇಲೆ ಓರ್ವ ಪೊಲೀಸ್ ಸೇರಿದಂತೆ 8 ಮಂದಿಯನ್ನು ಬಂಧಿಸಲಾಗಿದೆ.
ಪುಣೆಯ ಪಿಂಪ್ರಿ ಚಿಂಚ್‌ವಾಡ್ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎಂದು ಪೊಲೀಸರು ಬುಧವಾರ ಮಾಹಿತಿ ನೀಡಿದ್ದಾರೆ. ಷೇರು ವ್ಯಾಪಾರಿಯೋರ್ವನನ್ನು ಅಪಹರಿಸಿ, ಆತನ ಬಳಿಯಿದ್ದ ಕ್ರಿಪ್ಟೋ ಕರೆನ್ಸಿಯನ್ನು ಸುಲಿಗೆ ಮಾಡಲು ಆರೋಪಿಗಳ ತಂಡ ಪ್ಲ್ಯಾನ್ ಮಾಡಿತ್ತು ಎನ್ನಲಾಗಿದೆ.
ದಿಲೀಪ್ ತುಕಾರಾಂ ಖಂಡಾರೆ ಎಂಬ ಕಾನ್‌ಸ್ಟೇಬಲ್ ಪುಣೆ ಸೈಬರ್ ಕ್ರೈಮ್ ಸೆಲ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಷೇರು ವ್ಯಾಪಾರಿ ವಿನಯ್ ನಾಯ್ಕ್ ಬಳಿ 300 ಕೋಟಿ ರೂಪಾಯಿ ಮೌಲ್ಯದ ಬಿಟ್‌ಕಾಯಿನ್ ಇರುವುದಾಗಿ ತಿಳಿದು ಬಂದಿತ್ತು ಎಂದು ಡಿಸಿಪಿ ಆನಂದ್ ಬೋಟೆ ಮಾಹಿತಿ ನೀಡಿದ್ದಾರೆ.