ನವದೆಹಲಿ:ತಾಲಿಬಾನ್ ಪಡೆಗಳು ಒಂದೊಂದಾಗಿ ಅಫ್ಘಾನಿಸ್ತಾನದ ಪ್ರದೇಶಗಳನ್ನು ತನ್ನ ಅಧೀನಕ್ಕೆ ತೆಗೆದುಕೊಳ್ಳುತ್ತಿವೆ. ತಾಲಿಬಾನ್ ಮತ್ತು ಆಫ್ಘನ್ ಪಡೆಗಳ ನಡುವೆ ಗುಂಡಿನ ಚಕಮಕಿ ಸರ್ವೇಸಾಮಾನ್ಯವಾಗಿದ್ದು, ಈ ಸಂಘರ್ಷದಲ್ಲಿ ಪುಲಿಟ್ಜರ್ ಪುರಸ್ಕೃತ ಫೋಟೋ ಜರ್ನಲಿಸ್ಟ್ ಡ್ಯಾನಿಶ್ ಸಿದ್ದಿಕಿ ಸಾವನ್ನಪ್ಪಿದ್ದಾರೆ.
ರಾಯಿಟರ್ಸ್ನಲ್ಲಿ ಫೋಟೋ ಜರ್ನಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಭಾರತದ ಡ್ಯಾನಿಶ್ ಸಿದ್ದಿಕಿ ಕಂದಾಹಾರ್ನಲ್ಲಿ ಆಫ್ಘನ್ ಸೈನಿಕರು ಮತ್ತು ತಾಲಿಬಾನ್ ಪಡೆಗಳ ನಡುವಿನ ಸಂಘರ್ಷದ ವರದಿ ಮಾಡಲು ತೆರಳಿದ್ದರು. ಸ್ಪಿನ್ ಬೋಲ್ಡಾಕ್ ಜಿಲ್ಲೆಯಲ್ಲಿ ನಡೆದ ತಾಲಿಬಾನಿಗಳ ದಾಳಿಯಲ್ಲಿ ಡ್ಯಾನಿಶ್ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಸ್ನೇಹಿತ ಡ್ಯಾನಿಶ್ ಸಿದ್ದಿಕಿಯನ್ನು ಕಳೆದುಕೊಂಡಿರುವ ಸುದ್ದಿ ಕೇಳಿ ತುಂಬಾ ದುಃಖವಾಗಿದೆ. ಅಫ್ಘನ್ ಭದ್ರತಾ ಪಡೆಗಳ ರಕ್ಷಣೆಯೊಂದಿಗೆ ಡ್ಯಾನಿಶ್ ತೆರಳಿದ್ದರು ಎಂದು ಅಫ್ಘಾನಿಸ್ತಾನದಲ್ಲಿರುವ ಭಾರತದ ರಾಯಭಾರಿ ಫರೀದ್ ಮಮುಂದಝೆ ಟ್ವೀಟ್ ಮಾಡಿದ್ದಾರೆ. ಇದರ ಜೊತೆಗೆ ಎರಡು ವಾರಗಳ ಹಿಂದೆ ಸಿದ್ದಿಕಿ ಕಾಬೂಲ್ಗೆ ಬಂದಾಗ ಆತನನ್ನು ಭೇಟಿಯಾಗಿದ್ದೆ ಎಂದು ತಿಳಿಸಿದ್ದಾರೆ.