ಪುದುಚೇರಿ:ಪುದುಚೇರಿ ಸರ್ಕಾರ ಜನರಿಗೆ ಸಿಹಿಸುದ್ದಿ ನೀಡಿದೆ. ಎಲ್ಪಿಜಿ ಗ್ಯಾಸ್ ಸಿಲಿಂಡರ್ ಮೇಲೆ 300 ರೂ. ಸಬ್ಸಿಡಿ ನೀಡುವುದಾಗಿ ಅಲ್ಲಿನ ಸರ್ಕಾರ ಘೋಷಿಸಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಗ್ಯಾಸ್ ಬೆಲೆಯಿಂದ ಕಂಗಾಲಾಗಿದ್ದ ಜನರಿಗೆ ಇದು ನೆಮ್ಮದಿ ತಂದಿದೆ. 2023-24ನೇ ಸಾಲಿನ ಬಜೆಟ್ನಲ್ಲಿ ಸರ್ಕಾರ ಈ ಘೋಷಣೆ ಮಾಡಿದೆ. ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಎನ್.ರಂಗಸ್ವಾಮಿ ಅವರು ಪಡಿತರ ಚೀಟಿ ಹೊಂದಿರುವ ಪ್ರತಿ ಕುಟುಂಬಕ್ಕೆ ತಿಂಗಳಿಗೆ ಒಂದು ಸಿಲಿಂಡರ್ ಮೇಲೆ 300 ರೂ. ಸಬ್ಸಿಡಿ ನೀಡಲಾಗುವುದು ಎಂದು ತಿಳಿಸಿದರು. ಈ ಯೋಜನೆಗಾಗಿ ಬಜೆಟ್ನಲ್ಲಿ 126 ಕೋಟಿ ರೂ. ಮೀಸಲಿಟ್ಟಿದ್ದಾಗಿ ತಿಳಿಸಿದರು. ಇದಲ್ಲದೇ, ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲು 100 ಕೋಟಿ ರೂ.ಗೂ ಹೆಚ್ಚು ಹೂಡಿಕೆ ಮಾಡಿರುವ ಕೈಗಾರಿಕೆಗಳಿಗೆ ಸಬ್ಸಿಡಿ ನೀಡಲಾಗುವುದು ಎಂದೂ ಇದೇ ವೇಳೆ ತಿಳಿಸಿದರು.
ವಿವಿಧ ದೇಶಗಳ ತಮಿಳು ವಿದ್ವಾಂಸರು ಭಾಗವಹಿಸುವ ‘ವಿಶ್ವ ತಮಿಳು ಸಮ್ಮೇಳನ’ವನ್ನು ಶೀಘ್ರದಲ್ಲೇ ಸರ್ಕಾರ ಆಯೋಜಿಸಲಿದೆ. ಇದಲ್ಲದೇ ಶ್ರೀ ಅರವಿಂದ ಘೋಷ್ರ 150ನೇ ಜನ್ಮದಿನಾಚರಣೆ ನಿಮಿತ್ತ ಅವರ ಚಿಂತನೆ, ತತ್ವಜ್ಞಾನ, ಯೋಗ, ಸಾಹಿತ್ಯದ ಸಂಶೋಧನೆಗಾಗಿ ರಾಷ್ಟ್ರೀಯ ಸಮ್ಮೇಳನ ನಡೆಯಲಿದೆ ಎಂದು ತಿಳಿಸಿದರು. ಪುದುಚೇರಿ ಮುಖ್ಯಮಂತ್ರಿ ರಾಮಸ್ವಾಮಿ ಅವರು 11,600 ಕೋಟಿ ವಾರ್ಷಿಕ ಬಜೆಟ್ ಅನ್ನು ಸೋಮವಾರ ವಿಧಾನಸಭೆಯಲ್ಲಿ ಮಂಡಿಸಿದರು.
ರಾಜಸ್ಥಾನದಲ್ಲೂ ಗ್ಯಾಸ್ ಬೆಲೆ ಇಳಿಕೆ:ಕಳೆದ ವರ್ಷ ಡಿಸೆಂಬರ್ನಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಗ್ಯಾಸ್ ಬೆಲೆ ಇಳಿಕೆ ಕುರಿತು ಪ್ರಮುಖ ಘೋಷಣೆ ಮಾಡಿದ್ದರು. ರಾಜ್ಯದಲ್ಲಿ ಉಜ್ವಲ ಯೋಜನೆಯ ಫಲಾನುಭವಿಗಳು ಬಳಸುವ ಅಡುಗೆ ಅನಿಲದ ಬೆಲೆ ಅರ್ಧದಷ್ಟು ಕಡಿತ ಮಾಡಲಾಗುವುದು ಎಂದು ಗಹ್ಲೋಟ್ ಹೇಳಿದ್ದರು. ಏಪ್ರಿಲ್ 1, 2023 ರಿಂದ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಕೇವಲ 500 ರೂ.ಗೆ ಮರುಪೂರಣ ಪಡೆಯುವ ಸೌಲಭ್ಯವನ್ನು ನೀಡಲಾಗುವುದು ಎಂದು ಅವರು ಘೋಷಿಸಿದ್ದರು.