ಚೆನ್ನೈ: 2022ನೇ ಹಣಕಾಸು ವರ್ಷದಲ್ಲಿ ಭಾರತದ ಸಾರ್ವಜನಿಕ ವಲಯ ಬ್ಯಾಂಕುಗಳ 2,044 ಶಾಖೆಗಳನ್ನು ಮುಚ್ಚಲಾಗಿದೆ ಮತ್ತು 13 ಸಾವಿರ ಉದ್ಯೋಗಗಳನ್ನು ಕಡಿತಗೊಳಿಸಲಾಗಿದೆ ಎಂದು ಬ್ಯಾಂಕ್ ಉದ್ಯೋಗಿಗಳ ಒಕ್ಕೂಟವೊಂದು ತಿಳಿಸಿದೆ.
ಮತ್ತೊಂದೆಡೆ, 2021 ಕ್ಕೆ ಹೋಲಿಸಿದರೆ 2022 ರಲ್ಲಿ ಖಾಸಗಿ ಬ್ಯಾಂಕ್‌ಗಳ ಶಾಖೆಗಳ ಸಂಖ್ಯೆ 4,023 ರಷ್ಟು ಏರಿಕೆಯಾಗಿದ್ದು, 34,342ಕ್ಕೆ ತಲುಪಿದೆ ಎಂದು ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘ (ಎಐಬಿಇಎ) ಹೇಳಿದೆ.
ಕಾರಣವೇನು?2020ರಲ್ಲಿ ಸರ್ಕಾರಿ ಬ್ಯಾಂಕ್‌ಗಳ ವಿಲೀನಗಳು, ಶಾಖೆಗಳ ಮರುಹೊಂದಾಣಿಕೆ ಮತ್ತು ಸಿಬ್ಬಂದಿ ನಿವೃತ್ತಿಯ ಕಾರಣಗಳಿಂದ ಶಾಖೆಗಳು ಮತ್ತು ಸಿಬ್ಬಂದಿ ಸಂಖ್ಯೆಯಲ್ಲಿ ಕಡಿತಕ್ಕೆ ಕಾರಣವಾಗಿದೆ ಎಂದು ಎಐಬಿಇಎ ಮಾಹಿತಿ ನೀಡಿದೆ.
ಹಣಕಾಸು ವರ್ಷ 2021 ರ ಅಂತ್ಯದ ವೇಳೆಗೆ ಖಾಸಗಿ ಬ್ಯಾಂಕುಗಳು 5,34,022 ಸಿಬ್ಬಂದಿ ಬಲ ಹೊಂದಿದ್ದವು. ಹಣಕಾಸು ವರ್ಷ 2022 ರಲ್ಲಿ, ಈ ಸಂಖ್ಯೆ 3,57,346 ಆಗಿದ್ದು, ಹಲವಾರು ಬ್ಯಾಂಕ್‌ಗಳು ತಮ್ಮ ಸಿಬ್ಬಂದಿಯ ಸಂಖ್ಯೆಯನ್ನು ವೆಬ್‌ಸೈಟ್‌ಗಳಲ್ಲಿ ನಮೂದಿಸಿಲ್ಲ.
ಎಐಬಿಇಎ ಪ್ರಕಾರ, ಹಣಕಾಸು ವರ್ಷ 2021 ರ ಅಂತ್ಯದ ವೇಳೆಗೆ ಸಾರ್ವಜನಿಕ ವಲಯದ ಬ್ಯಾಂಕುಗಳು 88,265 ಶಾಖೆಗಳನ್ನು ಹೊಂದಿದ್ದವು ಮತ್ತು ಹಣಕಾಸು ವರ್ಷ 2022 ರಲ್ಲಿ ಈ ಸಂಖ್ಯೆ 86,221 ಕ್ಕೆ ಇಳಿದಿದೆ.
ಅದೇ ರೀತಿ, ಹಣಕಾಸು ವರ್ಷ 2020 ರಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶಾಖೆಗಳ ಸಂಖ್ಯೆ 90,520 ಆಗಿತ್ತು. ಹಣಕಾಸು ವರ್ಷ 2021 ರಲ್ಲಿ ಸರ್ಕಾರಿ ಬ್ಯಾಂಕ್‌ಗಳ ಸಿಬ್ಬಂದಿ ಸಂಖ್ಯೆ 8,07,048 ಆಗಿತ್ತು ಮತ್ತು ಹಣಕಾಸು ವರ್ಷ 2022 ರಲ್ಲಿ ಇದು 7,94,040 ಕ್ಕೆ ಇಳಿದಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.