ಶ್ರೀನಗರ (ಜಮ್ಮು-ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ ಆರ್ ಆರ್ ಸ್ವೈನ್ ಅವರು ಡಿಸೆಂಬರ್ 16ರಂದು ಶ್ರೀನಗರದಲ್ಲಿ ಸಾರ್ವಜನಿಕ ದರ್ಬಾರ್ ನಡೆಸಿದರು. ಸಾರ್ವಜನಿಕರಿಗೆ ನೇರವಾಗಿ ಪೊಲೀಸ್ ಅಧಿಕಾರಿಗಳೊಂದಿಗೆ ಸಂವಹನ ನಡೆಸಲು ಮತ್ತು ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಈ ಸಭೆ ಅವಕಾಶ ಮಾಡಿಕೊಟ್ಟಿತು.
ಈ ಸಾರ್ವಜನಿಕ ಪರಿಹಾರ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಭಾಗವಹಿಸಿದ್ದರು. ಪಬ್ಲಿಕ್ ದರ್ಬಾರ್ ಸಮಯದಲ್ಲಿ, ಆರ್ ಆರ್ ಸ್ವೈನ್ ಅವರು ಜನರ ಕುಂದುಕೊರತೆಗಳನ್ನು ಆಲಿಸಿದರು. ಜೊತೆಗೆ ತ್ವರಿತ, ಸೂಕ್ತ ಕ್ರಮದ ಭರವಸೆಯನ್ನೂ ನೀಡಿದರು.
ಪೊಲೀಸ್ ಇಲಾಖೆ ಮತ್ತು ಸಾರ್ವಜನಿಕರ ನಡುವಿನ ಈ ಮುಕ್ತ ಸಂವಾದ ನಂಬಿಕೆ ಮತ್ತು ತಿಳುವಳಿಯ ಅಭಿವೃದ್ಧಿಗೆ ಸಹಾಯ ಮಾಡುತ್ತದೆ. ಜೊತೆಗೆ, ಸಮುದಾಯದ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಲು ಸಹಾಯ ಮಾಡುತ್ತದೆ. ಇಂತಹ ಸಾರ್ವಜನಿಕ ದರ್ಬಾರ್‌ಗಳು ಪೊಲೀಸರ ಬದ್ಧತೆಯನ್ನು ಸಾಬೀತುಪಡಿಸುತ್ತವೆ. ಇದು ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತೆ ಮತ್ತು ಕಾನೂನು ಜಾರಿಗೆ ಸಂಬಂಧಿಸಿದ ಸವಾಲುಗಳನ್ನು ಪರಿಹರಿಸುವಲ್ಲಿ ಮುಕ್ತ ಸಂವಹನದ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ.
ಪುಲ್ವಾಮಾ: ಮತ್ತೊಂದೆಡೆ ಸುರಕ್ಷತೆಯೊಂದಿಗೆ ವಿಕಾಸದೆಡೆಗೆ ಎಂಬ ಧ್ಯೇಯವಾಕ್ಯದಡಿ ಕಾಶ್ಮೀರ ಗಡಿ ಭದ್ರತಾ ಪಡೆ (Frontier Hqr Border Security Force) ಡಿಸೆಂಬರ್ 16 ರಂದು ನಾಗರಿಕ ಚಟುವಟಿಕೆ ಕಾರ್ಯಕ್ರಮ ಆಯೋಜಿಸಿತ್ತು. ಈ ಕಾರ್ಯಕ್ರಮದಡಿ, ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಮಲಂಗ್‌ಪೋರಾದ ಹಳ್ಳಿ ಪ್ರದೇಶಗಳ ಬಡ ಗ್ರಾಮಸ್ಥರಿಗೆ ಕೆಲ ಸೌಲಭ್ಯ ಒದಗಿಸಲಾಗುತ್ತಿದೆ.