ನವದೆಹಲಿ : ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ದೆಹಲಿಯ ಜಂತರ್ ಮಂತರ್ನಲ್ಲಿ ಕಳೆದ ಕೆಲವು ದಿನಗಳಿಂದ ಖ್ಯಾತ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಕಳೆದ ಮೇ 11 ರಿಂದ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದು, ವಿನೇಶ್ ಫೋಗಟ್, ಸಾಕ್ಷಿ ಮಲಿಕ್, ಬಜರಂಗ್ ಪುನಿಯಾ ಸೇರಿದಂತೆ ಹಲವು ಕುಸ್ತಿಪಟುಗಳು ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಅಲ್ಲದೇ ಈ ಕುಸ್ತಿಪಟುಗಳಿಗೆ ಇತರ ಕ್ರೀಡಾ ಪಟುಗಳು ಬೆಂಬಲ ಸೂಚಿಸಿದ್ದಾರೆ.
ಈ ನಡುವೆ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಅಧ್ಯಕ್ಷೆ ಪಿ.ಟಿ ಉಷಾ ಪ್ರತಿಭಟನಾನಿರತ ಕುಸ್ತಿಪಟುಗಳನ್ನು ಭೇಟಿ ಮಾಡಿದ್ದಾರೆ. ಈ ಹಿಂದೆ ಪಿ.ಟಿ ಉಷಾ ಅವರ ಹೇಳಿಕೆಯಿಂದ ಕುಸ್ತಿಪಟುಗಳು ಅಸಮಾಧಾನಗೊಂಡಿದ್ದರು. ಕುಸ್ತಿಪಟುಗಳನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸದೇ ಪಿ.ಟಿ ಉಷಾ ಅಲ್ಲಿಂದ ತೆರಳಿದ್ದಾರೆ. ಬಳಿಕ ಮಾತನಾಡಿದ ಬಜರಂಗ್ ಪೂನಿಯಾ, ಪಿ.ಟಿ ಉಷಾ ನಮ್ಮನ್ನು ಭೇಟಿ ಮಾಡಿ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ. ಅವರು ತಾನು ಮೊದಲಾಗಿ ಕ್ರೀಡಾಪಟು ನಂತರ ರಾಜಕಾರಣಿ. ಕುಸ್ತಿಪಟುಗಳಿಗೆ ಖಂಡಿತವಾಗಿಯೂ ನ್ಯಾಯ ಒದಗಿಸುವುದಾಗಿ ಹೇಳಿದ್ದಾರೆ. ನನ್ನ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂದು ಪಿ.ಟಿ ಉಷಾ ಹೇಳಿದ್ದಾಗಿ ಪೂನಿಯಾ ಮಾಧ್ಯಮಗಳಿಗೆ ತಿಳಿಸಿದರು.
ಈ ಹಿಂದೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಪಿ.ಟಿ ಉಷಾ, ''ಲೈಂಗಿಕ ಕಿರುಕುಳ ಆರೋಪ ಸಂಬಂಧ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಸಮಿತಿಯನ್ನು ಹೊಂದಿದೆ. ಬೀದಿಯಲ್ಲಿ ಪ್ರತಿಭಟಿಸುವ ಬದಲು ಕುಸ್ತಿಪಟುಗಳು ನಮ್ಮ ಬಳಿಗೆ ಬರಬಹುದಿತ್ತು. ಆದರೆ, ಕುಸ್ತಿಪಟುಗಳು ಅಸೋಸಿಯೇಷನ್ನನ್ನು ಸಂಪರ್ಕಿಸಿಲ್ಲ. ಇದು ಕುಸ್ತಿಪಟುಗಳಿಗೆ ಮಾತ್ರವಲ್ಲ ಕ್ರೀಡೆಗೂ ಒಳ್ಳೆಯದಲ್ಲ. ಸ್ವಲ್ಪ ಶಿಸ್ತು ಇರಬೇಕು'' ಎಂಬ ಹೇಳಿಕೆ ನೀಡಿದ್ದರು.
ಪಿ. ಟಿ ಉಷಾ ಅವರ ಹೇಳಿಕೆಗೆ ಪ್ರತಿಭಟನಾ ನಿರತ ಕುಸ್ತಿಪಟುಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸಾಕ್ಷಿ ಮಲಿಕ್, ಉಷಾ ಅವರ ಹೇಳಿಕೆಯಿಂದ ನಮ್ಮ ಮನಸ್ಸಿಗೆ ತುಂಬಾ ಬೇಜಾರಾಗಿದೆ. ಅವರೂ ಸ್ವತಃ ಮಹಿಳೆಯಾಗಿದ್ದು ನಮಗೆ ಬೆಂಬಲ ಸೂಚಿಸುತ್ತಿಲ್ಲ. ನಾವು ಇಲ್ಲಿ ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ. ನಮಗೆ ನ್ಯಾಯ ಸಿಕ್ಕಿದ್ದರೆ, ನಾವು ಇಲ್ಲಿ ಬಂದು ಪ್ರತಿಭಟನೆ ಮಾಡುತ್ತಿರಲಿಲ್ಲ ಎಂದು ಹೇಳಿದ್ದರು. ಇನ್ನು, ವಿನೇಶ್ ಫೋಗಟ್ ಈ ಬಗ್ಗೆ ಚರ್ಚೆ ನಡೆಸಲು ಉಷಾ ಅವರನ್ನು ಸಂಪರ್ಕಿಸಿದರೂ, ಯಾವುದೇ ಸೂಕ್ತ ಪ್ರತಿಕ್ರಿಯೆ ದೊರೆತಿಲ್ಲ ಎಂದು ಕಿಡಿಕಾರಿದ್ದರು.