ಅಪರೂಪದ ಕ್ಷಣಕ್ಕೆ ರಾಜ್ಯಸಭೆ ಸಾಕ್ಷಿ... ಕಲಾಪದ ಅಧ್ಯಕ್ಷತೆ ವಹಿಸಿದ ಪಿಟಿ ಉಷಾ ನವದೆಹಲಿ: ಸಂಸತ್ತಿನ ಮೇಲ್ಮನೆ ಇಂದು ಅಪರೂಪದ ಕ್ಷಣಕ್ಕೆ ಸಾಕ್ಷಿಯಾಯಿತು. ರಾಜ್ಯಸಭಾಧ್ಯಕ್ಷರು ಮತ್ತು ಉಪಾಧ್ಯಕ್ಷರ ಅನುಪಸ್ಥಿತಿಯಲ್ಲಿ ಪ್ರಸಿದ್ಧ ಮಾಜಿ ಓಟಗಾರ್ತಿ ಹಾಗು ರಾಜ್ಯಸಭೆ ಸದಸ್ಯೆ ಪಿ.ಟಿ.ಉಷಾ ಅವರು ಕಲಾಪದ ಅಧ್ಯಕ್ಷತೆ ವಹಿಸಿದ್ದರು. ಈ ಬಗ್ಗೆ ಅವರೇ ಟ್ವಿಟರ್ನಲ್ಲಿ ವಿಡಿಯೋ ಶೇರ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ದೇಶದ ಶಾಶ್ವತ ಸಮಸ್ಯೆಗಳಿಗೆ ಕಾಂಗ್ರೆಸ್ ಎಂದಿಗೂ ಪರಿಹಾರ ಹುಡುಕಲಿಲ್ಲ: ರಾಜ್ಯಸಭೆಯಲ್ಲಿ ಮೋದಿ
ರಾಜ್ಯಸಭಾಧ್ಯಕ್ಷರಾದ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಸೇರಿದಂತೆ ಉಪ ಸಭಾಪತಿಗಳು ಸಾಮಾನ್ಯವಾಗಿ ರಾಜ್ಯಸಭೆ ಪೀಠ ಅಲಂಕರಿಸುತ್ತಾರೆ. ಇಲ್ಲವೇ, ಉಪ ಉಪ ಸಭಾಪತಿಗಳ ಸಮಿತಿಯ ಸದಸ್ಯರಲ್ಲಿ ಒಬ್ಬರು ಕಲಾಪಗಳ ಅಧ್ಯಕ್ಷತೆ ವಹಿಸುವುದು ವಾಡಿಕೆ.
"ಫ್ರಾಂಕ್ಲಿನ್ ಡಿ ರೂಸ್ವೆಲ್ಟ್ ಹೇಳಿದಂತೆ ದೊಡ್ಡ ಸ್ಥಾನದೊಂದಿಗೆ ದೊಡ್ಡ ಜವಾಬ್ದಾರಿ ಬರುತ್ತದೆ. ರಾಜ್ಯಸಭಾ ಅಧಿವೇಶನ ನಡೆಸುವಾಗ ನನಗೂ ಇದೇ ಭಾವನೆ ಮೂಡಿತು. ಜನರು ನನ್ನ ಮೇಲೆ ಇಟ್ಟಿರುವ ನಂಬಿಕೆಯೊಂದಿಗೆ ಈ ಪ್ರಯಾಣದಲ್ಲಿ ಇನ್ನಷ್ಟು ಮೈಲಿಗಲ್ಲುಗಳನ್ನು ಸೃಷ್ಟಿಸಲು ನಾನು ಆಶಿಸುತ್ತೇನೆ" ಎಂದು ಪಿ.ಟಿ.ಉಷಾ ಹೇಳಿದ್ದಾರೆ.
ಇದನ್ನೂ ಓದಿ:ಭಾರತೀಯ ಒಲಂಪಿಕ್ ಸಂಸ್ಥೆ ಅಧ್ಯಕ್ಷರಾಗಿ ಪಿಟಿ ಉಷಾ ಅವಿರೋಧ ಆಯ್ಕೆ
"ತುಂಬಾ ಹೆಮ್ಮೆಯ ಕ್ಷಣ. ನೀವು ಭಾರತದ ಹೆಣ್ಣು ಮಕ್ಕಳಿಗೆ ನಿಜವಾದ ಸ್ಫೂರ್ತಿ" ಎಂದು ಟ್ವಿಟರ್ ಬಳಕೆದಾರರೊಬ್ಬರು ಹೇಳಿದ್ದಾರೆ. "ನಿಮ್ಮ ಬಗ್ಗೆ ತುಂಬಾ ಹೆಮ್ಮೆಯಿದೆ ಉಷಾ ಅವರೇ, ನಿಮ್ಮ ಮುಂದಿನ ಪ್ರಯಾಣಕ್ಕೆ ಶುಭವಾಗಲಿ. ಹೀಗೆ ಮುಂದುವರಿಯಿರಿ ಮತ್ತು ಮತ್ತೊಮ್ಮೆ ಇತಿಹಾಸ ರಚಿಸಿ" ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. "ನಿಜವಾದ ಸಬಲೀಕರಣ. ಆಲ್ ದಿ ಬೆಸ್ಟ್ ಮತ್ತು ನೀವು ದೇಶಕ್ಕೆ ಇನ್ನೂ ಹೆಚ್ಚಿನದನ್ನು ಹಿಂದಿರುಗಿಸುತ್ತೀರಿ ಮೇಡಂ" ಎಂದು ಇನ್ನೊಬ್ಬರು ಟ್ವೀಟ್ ಮಾಡಿದ್ದಾರೆ.
ಪಿ.ಟಿ.ಉಷಾ ಅವರ ಬಗ್ಗೆ..: ಭಾರತದ ಶ್ರೇಷ್ಠ ಓಟಗಾರ್ತಿಯಾದ ಪಿ.ಟಿ.ಉಷಾ 'ಪಯ್ಯೋಳಿ ಎಕ್ಸ್‌ಪ್ರೆಸ್' ಎಂದೇ ಹೆಸರು ಮಾಡಿದ್ದಾರೆ. ಅನೇಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಅನೇಕ ದಾಖಲೆಗಳನ್ನು ತಮ್ಮ ಹೆಸರಲ್ಲಿ ಹೊಂದಿದ್ದು, ಏಷ್ಯನ್ ಗೇಮ್ಸ್‌ನಲ್ಲಿ ನಾಲ್ಕು ಚಿನ್ನದ ಪದಕ ಮತ್ತು ಏಳು ಬೆಳ್ಳಿ ಪದಕ ಗೆದ್ದಿದ್ದಾರೆ. ಈ ಎಲ್ಲ ಸಾಧನೆಗಳನ್ನು ಗಮನಿಸಿ ಬಿಜೆಪಿ, 2022ರ ಜುಲೈನಲ್ಲಿ ಉಷಾ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿತ್ತು. ಇದಾದ ನಂತರ ನವೆಂಬರ್‌ನಲ್ಲಿ ಅವರು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದಾರೆ. ಈ ಮೂಲಕ ಒಲಂಪಿಕ್ ಸಂಸ್ಥೆಗೆ ಆಯ್ಕೆಯಾದ ಮೊದಲ ಮಹಿಳೆ ಎಂಬ ಖ್ಯಾತಿಯನ್ನೂ ಇವರು ಹೊಂದಿದ್ದಾರೆ.
ಇದನ್ನೂ ಓದಿ:ರಾಜ್ಯಸಭಾ ಸದಸ್ಯೆಯಾಗಿ ಪ್ರಮಾಣ ವಚನ ಸ್ವೀಕರಿಸಿದ ಪಿಟಿ ಉಷಾ