ಪಾಟ್ನಾ(ಬಿಹಾರ): ರಾಜ್ಯದಲ್ಲಿ ಸೈಕೋ ಕಿಲ್ಲರ್ಗಳ ಹಾವಳಿ ಹೆಚ್ಚಾಗುತ್ತಿದೆ. ಬೈಕ್‌ನಲ್ಲಿ ಬಂದ ವ್ಯಕ್ತಿಗಳಿಬ್ಬರು ಏಕಾಏಕಿ ರಸ್ತೆಯಲ್ಲಿದ್ದ ಜನರ ಮೇಲೆ ಗುಂಡು ಹಾರಿಸಿ ವಿಕೃತಿ ಮೆರೆದಿದ್ದು, ಓರ್ವ ಮೃತಪಟ್ಟು 10 ಮಂದಿ ಗಾಯಗೊಂಡಿರುವ ಘಟನೆ ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.
ಚಂದನ್ ಕುಮಾರ್ (30) ಮೃತ ವ್ಯಕ್ತಿ. ಈ ಸಾಮೂಹಿಕ ಗುಂಡಿನ ದಾಳಿ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಬೇಗುಸರಾಯ್ ಜಿಲ್ಲೆಯ ಮಲ್ಹಿಪುರದಲ್ಲಿ ಇಬ್ಬರು, ಬರೌನಿ ಥರ್ಮಲ್ ಚೌಕ್‌ನಲ್ಲಿ ಮೂವರು, ಬರೌನಿಯಲ್ಲಿ ಇಬ್ಬರು, ತೆಘ್ರಾದಲ್ಲಿ ಇಬ್ಬರು ಮತ್ತು ಬಚ್ವಾರಾದಲ್ಲಿ ಇಬ್ಬರ ಮೇಲೆ ಗುಂಡು ಹಾರಿಸಲಾಗಿದೆ. ಗಾಯಗೊಂಡವರಲ್ಲಿ ಕೆಲವರನ್ನು ಅಮರಜೀತ್ ಕುಮಾರ್, ಗೌತಮ್ ಕುಮಾರ್, ನಿತೀಶ್ ಕುಮಾರ್, ವಿಶಾಲ್ ಕುಮಾರ್ ಮತ್ತು ದೀಪಕ್ ಕುಮಾರ್ ಎಂದು ಗುರುತಿಸಲಾಗಿದೆ.