ಎಕ್ಸ್‌ಪೋಸ್ಯಾಟ್ ಉಡ್ಡಯನ ಯಶಸ್ವಿ ನವದೆಹಲಿ: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಹೊಸ ವರ್ಷದ ಮೊದಲ ದಿನವೇ ಐತಿಹಾಸಿಕ ಸಾಧನೆ ಮಾಡಿತು. ಕಪ್ಪು ಕುಳಿಗಳು, ನ್ಯೂಟ್ರಾನ್ ನಕ್ಷತ್ರಗಳು ಮತ್ತು ಸಕ್ರಿಯ ಗ್ಯಾಲಕ್ಸಿಯ ನ್ಯೂಕ್ಲಿಯಸ್ಗಳಂತಹ ಆಕಾಶ ವಸ್ತುಗಳ ಒಳನೋಟ ನೀಡುವ ತನ್ನ ಮೊದಲ ಎಕ್ಸ್-ರೇ ಪೋಲಾರಿಮೀಟರ್ ಉಪಗ್ರಹ ಎಕ್ಸ್‌ಪೋಸ್ಯಾಟ್ (XPoSat ) X-ray Polarimeter Satellite ಅನ್ನು ಯಶಸ್ವಿಯಾಗಿ ನಭಕ್ಕೆ ಉಡಾವಣೆ ಮಾಡಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟದಿಂದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ) ಮೂಲಕ ಉಪಗ್ರಹದ ಉಡಾವಣೆ ಮಾಡಲಾಯಿತು. ಇದರೊಂದಿಗೆ ಇತರೆ ಹತ್ತು ಉಪಗ್ರಹಗಳೂ ಇದ್ದವು.
ಅಕ್ಟೋಬರ್‌ನಲ್ಲಿ ಗಗನಯಾನ ಪರೀಕ್ಷಾ ಡಿ1 ಮಿಷನ್ ಯಶಸ್ವಿಯಾದ ನಂತರದ ಉಡಾವಣೆ ಇದಾಗಿದೆ. PSLV-C58 ರಾಕೆಟ್ನಿಂದ ಈವರೆಗೆ ನಡೆಸಲಾಗುತ್ತಿರುವ 60ನೇ ಉಡಾವಣೆಯೂ ಹೌದು. ಇದರಲ್ಲಿ ಎರಡು ಪೆಲೋಡ್ಗಳಿದ್ದು ಮತ್ತು 10 ಇತರೆ ಉಪಗ್ರಹಗಳನ್ನು ಭೂಮಿಯ ಕಡಿಮೆ ಕಕ್ಷೆಗಳಲ್ಲಿ ನಿಯೋಜಿಸಲಾಗುತ್ತದೆ. ಈ ಉಪಗ್ರಹಗಳನ್ನು ಸ್ಟಾರ್ಟಪ್ಸ್, ಶೈಕ್ಷಣಿಕ ಸಂಸ್ಥೆಗಳು ಮತ್ತು ಇಸ್ರೋ ಕೇಂದ್ರಗಳು ನಿರ್ಮಿಸಿವೆ.
ಎಕ್ಸ್‌ಪೋಸ್ಯಾಟ್ ಎಂದರೇನು?:ಎಕ್ಸ್‌ಪೋಸ್ಯಾಟ್ ಮಿಷನ್ ಅನ್ನು ತೀವ್ರವಾದ ಎಕ್ಸ್-ರೇ ಮೂಲಗಳ ಧ್ರುವೀಕರಣವನ್ನು ಸಂಶೋಧಿಸಲು ವಿನ್ಯಾಸಗೊಳಿಸಲಾಗಿದೆ. ಎಕ್ಸ್ರೇ ಪೋಲಾರಿಮೀಟರ್ ಉಪಗ್ರಹವು (XPoSat) ಇಸ್ರೋದ ಮೊದಲ ಬೆಳಕಿನ ಯೋಜನೆಯಾಗಿದೆ. ಅಲ್ಲದೇ, ಅಮೆರಿಕದ ಬಳಿಕ ನಡೆಸುತ್ತಿರುವ ಎರಡನೇ ಯೋಜನೆ. ಇದು ಬಾಹ್ಯಾಕಾಶದಲ್ಲಿ ತೀವ್ರವಾದ ಎಕ್ಸ್ರೇ ಮೂಲಗಳ ಧ್ರುವೀಕರಣವನ್ನು ಸಂಶೋಧಿಸುವ ಗುರಿ ಹೊಂದಿದೆ. ಆಕಾಶ ಮೂಲಗಳಿಂದ ಎಕ್ಸ್-ರೇ ಬೆಳಕು ಹೊರಸೂಸುವಿಕೆಯ ಮೇಲೆ ಸಂಶೋಧನೆಯನ್ನು ಕೈಗೊಳ್ಳಲು ಬಳಸುತ್ತಿರುವ ವೈಜ್ಞಾನಿಕ ಉಪಗ್ರಹವಾಗಿದೆ.
ಇದನ್ನೂ ಓದಿ:ಹೊಸ ವರ್ಷದ ಮೊದಲ ದಿನವೇ ಇಸ್ರೋ ಮಹತ್ವದ ಉಪಗ್ರಹ ಉಡಾವಣೆ; ಏನಿದರ ವಿಶೇಷತೆ?