ಪಾಟ್ನಾ:ಎಂಜಿನ್‌ನಲ್ಲಿಬೆಂಕಿ ಕಾಣಿಸಿಕೊಂಡು ತಕ್ಷಣವೇ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿದ ಪೈಲಟ್ಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ವಿಮಾನದಲ್ಲಿದ್ದ 185 ಜನರ ಪ್ರಾಣ ಕಾಪಾಡಿದ ಪೈಲಟ್ ಮೋನಿಕಾ ಖನ್ನಾ ಮತ್ತು ಸಹ ಪೈಲಟ್ ಬಲ್ಪ್ರೀತ್ ಸಿಂಗ್ ಭಾಟಿಯಾ ಅವರನ್ನು ಸ್ಪೈಸ್‌ಜೆಟ್ ಶ್ಲಾಘಿಸಿದೆ.
ಬಿಹಾರದ ಪಾಟ್ನಾ ವಿಮಾನ ನಿಲ್ದಾಣದಲ್ಲಿ ಭಾನುವಾರ ಸಂಭವಿಸಬಹುದಾಗಿದ್ದ ದೊಡ್ಡ ಅಪಘಾತವನ್ನು ಪೈಲಟ್ಗಳ ಚಾಣಾಕ್ಷತನದಿಂದ ದೂರ ಮಾಡಲಾಗಿದೆ. ಪಾಟ್ನಾದಿಂದ ದೆಹಲಿಗೆ ಹಾರುತ್ತಿದ್ದ ಸ್ಪೈಸ್‌ಜೆಟ್ ವಿಮಾನನಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡಿತ್ತು. ತಕ್ಷಣವೇ ಪೈಲೆಟ್ಗಳು ವಿಮಾನವನ್ನು ತುರ್ತು ಭೂ ಸ್ಪರ್ಶ ಮಾಡಿದ್ದರು.
ಪೈಲಟ್ ಮೋನಿಕಾ ಖನ್ನಾಗೆ ಮೆಚ್ಚುಗೆ: ವಿಮಾನದ ಮುಖ್ಯ ಪೈಲಟ್ ಆಗಿದ್ದ ಮೋನಿಕಾ ಖನ್ನಾರ ಬುದ್ಧಿವಂತಿಕೆಗೆ ಕ್ಯಾಪ್ಟನ್ ಗುರುಚರಣ್ ಅರೋರಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣವೇ ಪಾಟ್ನಾ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿ ಅನಾಹುತ ತಪ್ಪಿಸಿದ್ದಾರೆ. ಅವರು ನುರಿತ ಪೈಲಟ್ ಆದ ಕಾರಣ ಈ ರೀತಿಯ ನಿರ್ಧಾರಕ್ಕೆ ತಕ್ಷಣವೇ ಬಂದಿದ್ದಾರೆ ಎಂದು ಹೇಳಿದ್ದಾರೆ.
ಸ್ಪೈಸ್‌ಜೆಟ್ ಪೈಲಟ್‌ಗಳಲ್ಲಿ ನಂಬಿಕೆ ಇಡಲು ನಾನು ಎಲ್ಲ ಪ್ರಯಾಣಿಕರಿಗೆ ಮನವಿ ಮಾಡುತ್ತೇನೆ. ಅವರೆಲ್ಲರೂ ಉತ್ತಮ ತರಬೇತಿ ಪಡೆದಿದ್ದಾರೆ. ಸ್ಪೈಸ್ ಜೆಟ್ ಪೈಲಟ್‌ಗಳು ಪಾಟ್ನಾದಲ್ಲಿನ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿಯೇ ಅವರ ಅನುಭವವನ್ನು ತಿಳಿಸುತ್ತದೆ. ಇದು ನಮಗೆ ಹೆಮ್ಮೆಯ ವಿಷಯ. ಸ್ಪೈಸ್‌ಜೆಟ್ ಯಾವುದೇ ಸಂದರ್ಭವನ್ನು ಶಾಂತಿಯುತವಾಗಿ ನಿಭಾಯಿಸಲು ಸಮರ್ಥ ಮತ್ತು ತರಬೇತಿ ಪಡೆದ ಪೈಲಟ್‌ಗಳನ್ನು ಹೊಂದಿದೆ ಎಂದು ಅವರು ತಿಳಿಸಿದರು.
ಕ್ಯಾಪ್ಟನ್ ಮೋನಿಕಾ ಚಾಣಾಕ್ಷತೆ:ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣವೇ ಪೈಲಟ್ ಮೋನಿಕಾ ಖನ್ನಾ ವಿಚಲಿತರಾಗದೇ ಎಲ್ಲಾ ಪ್ರಯಾಣಿಕರನ್ನು ಸಂಭಾಳಿಸಿ, ಎಡಬದಿಯ ಎಂಜಿನ್ ಆಫ್ ಮಾಡಿದರು. ಬಳಿಕ ತಕ್ಷಣವೇ ಎಟಿಸಿಗೆ ಈ ಬಗ್ಗೆ ಮಾಹಿತಿ ನೀಡಿ ತುರ್ತು ಭೂಸ್ಪರ್ಶಕ್ಕೆ ರನ್ವೇಗೆ ಮನವಿ ಮಾಡಿದರು.
ಕೆಲ ನಿಮಿಷಗಳವರೆಗೂ ವಿಮಾನವನ್ನು ಗಾಳಿಯಲ್ಲಿಯೇ ತೇಲಿಸುತ್ತಾ, ಒಂದೇ ಎಂಜಿನ್ನಲ್ಲಿ ವಿಮಾನವನ್ನು ನಿಯಂತ್ರಣಕ್ಕೆ ಪಡೆದು ತುರ್ತು ಭೂಸ್ಪರ್ಶಕ್ಕೆ ಅನುಮತಿ ಪಡೆದ ತಕ್ಷಣವೇ ವಿಮಾನವನ್ನು ಕೆಲವೇ ನಿಮಿಷಗಳಲ್ಲಿ ಲ್ಯಾಂಡ್ ಮಾಡಿ ಎಲ್ಲ ಪ್ರಯಾಣಿಕರ ಬದುಕು ಕಾಪಾಡಿದರು.
ಇದನ್ನೂಓದಿ: ಸ್ಪೈಸ್‌ಜೆಟ್ ರೆಕ್ಕೆಯಲ್ಲಿ ಬೆಂಕಿ: ತುರ್ತು ಭೂಸ್ಪರ್ಶಿಸಿದ ವಿಮಾನ, 185 ಪ್ರಯಾಣಿಕರು ಸೇಫ್