ಕಾಶ್ಮೀರಿ ಪಂಡಿತ ಸಂಜಯ್ ಶರ್ಮಾ ಹತ್ಯೆಗೆ ಆಕ್ರೋಶ: ಸ್ಥಳೀಯರಿಂದ ಉಗ್ರರ ವಿರುದ್ಧ ಪ್ರತಿಭಟನೆ ಪುಲ್ವಾಮಾ (ಜಮ್ಮು ಮತ್ತು ಕಾಶ್ಮೀರ): ಕಾಣಿವೆ ನಾಡು ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಭಯೋತ್ಪಾದಕರು ಮತ್ತೆ ದೃಷ್ಕೃತ್ಯ ಎಸಗಿದ್ದಾರೆ. ಇಂದು ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅಚಾನ್ ಪ್ರದೇಶದಲ್ಲಿ ಕಾಶ್ಮೀರಿ ಪಂಡಿತ ಸಂಜಯ್ ಶರ್ಮಾ ಎಂಬುವವರನ್ನು ಉಗ್ರರು ಹತ್ಯೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಈ ಹತ್ಯೆಯನ್ನು ಖಂಡಿಸಿ ಮತ್ತು ಉಗ್ರರ ವಿರುದ್ಧ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ:ಗಸ್ತು ತಿರುಗುವ ವೇಳೆ ಐಇಡಿ ಮೇಲೆ ಕಾಲಿಟ್ಟ ಯೋಧ; ದಿಢೀರ್ ಸ್ಫೋಟ, ಸ್ಥಳದಲ್ಲೇ ಹುತಾತ್ಮ!
ಸಂಜಯ್ ಶರ್ಮಾ ಅವರನ್ನು ಉಗ್ರರು ಹತ್ಯೆ ಮಾಡಿದ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಒಟ್ಟಾಗಿ ಸೇರಿ ಪ್ರತಿಭಟನೆ ಶುರು ಮಾಡಿದ್ದಾರೆ. ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದನೆ ಮತ್ತದರ ಚಟುವಟಿಕೆಗಳು ನಿಲ್ಲಿಸಬೇಕೆಂದು ಘೋಷಣೆಗಳನ್ನು ಕೂಗಿದರು. ಇಲ್ಲಿ ಮುಸ್ಲಿಮರು, ಪಂಡಿತರು ಮತ್ತು ಸಿಖ್ಖರು ಶಾಂತಿಯುತವಾಗಿ ಜೀವಿಸಬೇಕು. ಭಯೋತ್ಪಾದನೆ ಕೊನೆಗಾಣಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಮೊದಲ ಬಾರಿಗೆ ಒಗ್ಗಟ್ಟಿನ ಪ್ರತಿಭಟನೆ: ಕಾಶ್ಮೀರ ಕಣಿವೆಯಲ್ಲಿ ಪಂಡಿತರನ್ನು ಗುರಿಯಾಸಿಕೊಂಡೇ ಅನೇಕ ಹತ್ಯೆಗಳು ನಡೆದಿವೆ. ಭಯೋತ್ಪಾದಕರು ಹಲವು ಕಾಶ್ಮೀರಿ ಪಂಡಿತರನ್ನು ಕೊಲೆ ಮಾಡಿದ್ದಾರೆ. ಆದರೆ, ಇದೇ ಮೊದಲ ಬಾರಿ ಕಾಶ್ಮೀರಿ ಪಂಡಿತರ ಹತ್ಯೆ ವಿಚಾರವಾಗಿ ಸ್ಥಳೀಯ ನಿವಾಸಿಗಳು ಒಗ್ಗಟ್ಟಿನ ಪ್ರತಿಭಟನೆಯನ್ನು ನಡೆಸಿದ್ದಾರೆ. ಇದರಲ್ಲಿ ಗ್ರಾಮದ ಹಿರಿಯರು ಮತ್ತು ಯುವಕರು ಕೂಡ ಪಾಲ್ಗೊಂಡಿದ್ದರು.
ಎಲ್ಲ ಪ್ರತಿಭಟನಾಕಾರರು ಈ ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸಿದರು. ಉಗ್ರರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರ ಹಾಕಿದರು. ಸಂಜಯ್ ಶರ್ಮಾ ಬಾಲ್ಯದಿಂದಲೂ ನಮ್ಮೊಂದಿಗೆ ಬೆಳೆದವರು. ಕಾಶ್ಮೀರಿ ಪಂಡಿತರು ಕಣಿವೆಯ ಇತರ ಭಾಗಗಳಿಗೆ ವಲಸೆ ಹೋದರೂ ಇವರು ಇಲ್ಲಿಯೇ ವಾಸಿಸುತ್ತಿದ್ದರು. ಇಲ್ಲಿನ ಪರಿಸ್ಥಿತಿಯನ್ನೂ ಎದುರಿಸಿ, ಇಲ್ಲಿಯೇ ಉಳಿಯಲು ನಿರ್ಧರಿಸಿದ್ದರು ಎಂದು ಸ್ಥಳೀಯರೊಬ್ಬರು ತಿಳಿಸಿದರು.
ಸಂಜಯ್ ಶರ್ಮಾ ಪ್ರಾಮಾಣಿಕ ವ್ಯಕ್ತಿಯಾಗಿದ್ದರು. ಆದರೆ, ಅವರನ್ನು ಕೆಲವು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ. ಅದನ್ನು ನಾವು ಬಲವಾಗಿ ಖಂಡಿಸುತ್ತೇವೆ. ನಮ್ಮ ಕಣಿವೆಗೆ ಉಗ್ರರು ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಿದ್ದಾರೆ. ಈ ಪಂಡಿತ ಕುಟುಂಬಕ್ಕೆ ಗ್ರಾಮದ ಪ್ರತಿಯೊಬ್ಬರು ಬೆಂಬಲವಾಗಿ ನಿಲ್ಲುತ್ತೇವೆ. ನಾವೆಲ್ಲರೂ ಸಮಾನವಾಗಿ ಆ ಕುಟುಂಬದ ದುಃಖದಲ್ಲಿ ಭಾಗಿಯಾಗುತ್ತಿದ್ದೇವೆ ಎಂದೂ ಹೇಳಿದರು.
ಸೆಕ್ಯೂರಿಟಿ ಗಾರ್ಡ್ ಆಗಿದ್ದ ಶರ್ಮಾ: ಉಗ್ರರ ದಾಳಿಯಲ್ಲಿ ಹತ್ಯೆಗೀಡಾದ ಸಂಜಯ್ ಶರ್ಮಾ ಬ್ಯಾಂಕ್ವೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಇಂದು ಬೆಳಗ್ಗೆ ಸಮೀಪದ ಮಾರ್ಕೆಟ್ಗೆ ಹೋಗುತ್ತಿದ್ದಾಗ ಉಗ್ರರು ಏಕಾಏಕಿ ಗುಂಡಿನ ದಾಳಿ ಮಾಡಿದ್ದರು. ಆಗ ತಕ್ಷಣವೇ ಸ್ಥಳೀಯರು ರಕ್ಷಣೆ ಮಾಡಿ ಆಸ್ಪತ್ರೆಗೆ ಸಾಗಿಸಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಸಂಜಯ್ ಶರ್ಮಾ ಕೊನೆಯುಸಿರೆಳೆದಿದ್ದರು. ಮತ್ತೊಂದೆಡೆ, ಈ ಹತ್ಯೆ ನಂತರ ಸ್ಥಳದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಅಲ್ಲದೇ, ದಾಳಿಕೋರ ಉಗ್ರರ ಪತ್ತೆಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.
ಇದನ್ನೂ ಓದಿ:ಪುಲ್ವಾಮ: ಗುಂಡು ಹಾರಿಸಿ ಕಾಶ್ಮೀರಿ ಪಂಡಿತನ ಹತ್ಯೆಗೈದ ಉಗ್ರರು!