ನವದೆಹಲಿ: ಕೃಷಿ ಮಸೂದೆ ವಿರೋಧಿಸಿ ರೈತರ ದೆಹಲಿ ಚಲೋಗೆ ಮಣಿದ ಸರ್ಕಾರ ದೆಹಲಿ ಪ್ರವೇಶಿಸಲು ರೈತರಿಗೆ ಕೊನೆಗೂ ಅನುಮತಿ ನೀಡಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ರೈತ ಸಂಘದ ನಡುವಿನ ಸಭೆಯ ನಂತರ ಶಾಂತಿಯುತ ಪ್ರತಿಭಟನೆಗೆ ಅವಕಾಶ ನೀಡಿದ್ದು, ನಗರದ ನಿರಂಕರಿ ಮೈದಾನದಲ್ಲಿ ಪ್ರತಿಭಟನೆ ನಡೆಸಲು ಸ್ಥಳ ನಿಗದಿ ಮಾಡಲಾಗಿದೆ.
ಅಖಿಲ ಭಾರತ ಕಿಸಾನ್ ಸಂಘರ್ಷ್ ಸಮನ್ವಯ ಸಮಿತಿಯ (ಎಐಕೆಎಸ್‌ಸಿಸಿ) ರಾಷ್ಟ್ರೀಯ ಸಂಚಾಲಕ ವಿ.ಎಂ.ಸಿಂಗ್, ಪ್ರತಿಭಟನಾ ನಿರತ ರೈತರ ಮೇಲೆ ಅಶ್ರುವಾಯು ಮತ್ತು ಜಲ ಫಿರಂಗಿಗಳನ್ನು ಬಳಸಿರುವುದನ್ನು ಖಂಡಿಸಿದ್ದಾರೆ.
ಈಟಿವಿ ಭಾರತ್ ಜೊತೆ ಮಾತನಾಡಿದ ಅವರು, ನವೆಂಬರ್ 1ರಂದು ರಾಮ್ ಲೀಲಾ ಮೈದಾನದಲ್ಲಿ ಪ್ರತಿಭಟನೆಗೆ ಅವಕಾಶ ಕೇಳಿದಾಗಲು ನಿರಾಕರಿಸಲಾಗಿತ್ತು, ಬಳಿಕ ರೈತರನ್ನು ಬಂಧಿಸಲಾಗಿತ್ತು. ರೈತರು ಈ ಕಾನೂನುಗಳ ವಿರುದ್ಧವಾಗಿದ್ದಾರೆ ಮತ್ತು ಸರ್ಕಾರ ಅದನ್ನು ಹಿಂತೆಗೆದುಕೊಳ್ಳುವವರೆಗೂ ಪ್ರತಿಭಟನೆ ನಡೆಸುತ್ತೇವೆ. ಸಮುದಾಯದೊಂದಿಗೆ ಚರ್ಚೆಯ ಬಳಿಕ ತಮ್ಮ ಮುಂದಿನ ನಿಲುವು ತಿಳಿಸಲಾಗುತ್ತದೆ ಎಂದಿದ್ದಾರೆ.