ಹೈದರಾಬಾದ್ : ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿದ ನೂರಾರು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಹೈದರಾಬಾದ್ನ ಅಶೋಕನಗರದಲ್ಲಿ ಈ ದಾರುಣ ಘಟನೆ ನಡೆದಿದೆ. ಸರ್ಕಾರಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿನಿ ಪ್ರವಲ್ಲಿಕಾ ಸಾವಿಗೆ ಶರಣಾದವಳು. ಈಕೆ ಬೃಂದಾವನ ಹಾಸ್ಟೆಲ್‌ನಲ್ಲಿದ್ದ ತನ್ನ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹಾಸ್ಟೆಲ್ ನಲ್ಲಿದ್ದುಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದಳು ಎಂದು ತಿಳಿದು ಬಂದಿದೆ.
ಪ್ರವಲ್ಲಿಕಾ ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿದ ಪೊಲೀಸರು ವಿದ್ಯಾರ್ಥಿನಿ ಶವವನ್ನು ಆಸ್ಪತ್ರೆಗೆ ಸಾಗಿಸಲು ಹಾಸ್ಟೆಲ್‌ಗೆ ಆಗಮಿಸಿದರು. ಈ ವೇಳೆ, ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದ ಅಭ್ಯರ್ಥಿಗಳು ಪೊಲೀಸರನ್ನು ತಡೆದು ಆಕ್ರೋಶ ಹೊರಹಾಕಿದರು. ಬಳಿಕ ಪೊಲೀಸರು ಹಾಗೂ ಅಭ್ಯರ್ಥಿಗಳ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಜಮಾಯಿಸಿದ್ದರಿಂದ ಅಶೋಕನಗರ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿತ್ತು.
ಇದನ್ನೂ ಓದಿ :ಮಂಗಳೂರಿನಲ್ಲಿ 60 ಬಸ್ಗಳ ಒಡೆಯ ಆತ್ಮಹತ್ಯೆ.. ಸಾಲು ಸಾಲು ಬಸ್ಗಳೊಂದಿಗೆ ಮಾಲೀಕನ ಅಂತಿಮಯಾತ್ರೆ
ವರಂಗಲ್ ಜಿಲ್ಲೆಯವರಾದ ಪ್ರವಲ್ಲಿಕಾ, ಅಶೋಕ್ ನಗರದಲ್ಲಿದ್ದುಕೊಂಡು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು. ಇತ್ತೀಚೆಗೆ ಗ್ರೂಪ್ 2 ಪರೀಕ್ಷೆ ಮತ್ತೊಮ್ಮೆ ಮುಂದೂಡಲ್ಪಟ್ಟಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ಸ್ನೇಹಿತರು ಹೇಳಿದ್ದಾರೆ. ಶುಕ್ರವಾರ ಮಧ್ಯರಾತ್ರಿಯವರೆಗೂ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ನಿರುದ್ಯೋಗಿ ಅಭ್ಯರ್ಥಿಗಳು ನ್ಯಾಯಕ್ಕಾಗಿ ಆಗ್ರಹಿಸಿದರು.
ಇದನ್ನೂ ಓದಿ :ಬೆಂಗಳೂರು : ಕಾಲೇಜಿಗೆ ತೆರಳಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ
ವಿದ್ಯಾರ್ಥಿನಿ ಆತ್ಮಹತ್ಯೆ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಬಿಜೆಪಿ ಸಂಸದ ಕೆ. ಲಕ್ಷ್ಮಣ್, ನೊಂದ ಅಭ್ಯರ್ಥಿಗಳೊಂದಿಗೆ ಸೇರಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ, ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ಆ್ಯಪ್ನಲ್ಲಿ ಟ್ವೀಟ್ ಮಾಡಿರುವ ಅವರು, " ಕಠಿಣ ಪರಿಶ್ರಮಿ ವಿದ್ಯಾರ್ಥಿನಿ ಪ್ರವಲ್ಲಿಕಾ ಆತ್ಮಹತ್ಯೆ ಮಾಡಿಕೊಂಡಿರುವುದು ಅತ್ಯಂತ ನೋವಿನ ಸುದ್ದಿ. ಹಲವು ತಿಂಗಳುಗಳಿಂದ ಸರ್ಕಾರಿ ಪರೀಕ್ಷೆಗಳಿಗೆ ಶ್ರದ್ಧೆಯಿಂದ ತಯಾರಿ ನಡೆಸುತ್ತಿದ್ದಳು.
ಆದರೆ, ಬಿಆರ್‌ಎಸ್ ಸರ್ಕಾರ ಪದೇ ಪದೇ ಪರೀಕ್ಷೆಗಳನ್ನು ರದ್ದುಪಡಿಸಿ ಮುಂದೂಡುತ್ತಿರುವುದರಿಂದ ಆಕೆ ಇಂತಹ ಕ್ರಮಕ್ಕೆ ಮುಂದಾಗಿದ್ದಾಳೆ. ಸರ್ಕಾರಿ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ನಿರುದ್ಯೋಗಿ ಯುವಕ - ಯುವತಿಯರ ಬಗ್ಗೆ ರಾಜ್ಯ ಸರ್ಕಾರ ಕರ್ತವ್ಯ ಲೋಪ ಎಸಗಿದೆ. ತೆಲಂಗಾಣ ಸರ್ಕಾರದ ನಿರ್ಲಕ್ಷದಿಂದಾಗಿ ಪ್ರವಲ್ಲಿಕಾ ಸೇರಿದಂತೆ ಅನೇಕ ಅಭ್ಯರ್ಥಿಗಳು ಸಮಸ್ಯೆ ಎದುರಿಸಿದ್ದಾರೆ, ಮೃತ ವಿದ್ಯಾರ್ಥಿನಿಗೆ ನ್ಯಾಯ ಕೊಡಿಸುತ್ತೇನೆ " ಎಂದಿದ್ದಾರೆ.
ಇದನ್ನೂ ಓದಿ :ವಿಡಿಯೋ ಮಾಡಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ : ಎಸ್ಪಿ ಕಾರ್ತಿಕ್ ರೆಡ್ಡಿ ಹೇಳಿದ್ದೇನು ?