ನವದೆಹಲಿ: ಸೇನಾ ನೇಮಕಾತಿಗಾಗಿ 'ಅಗ್ನಿಪಥ್' ಯೋಜನೆ ವಿರುದ್ಧ ಶುಕ್ರವಾರದ ತೀವ್ರ ಪ್ರತಿಭಟನೆಯ ನಂತರ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಇಲಾಖೆ ಹೆಚ್ಚುವರಿ ಪಡೆಗಳನ್ನು ನಿಯೋಜಿಸಿದೆ. ನಿನ್ನೆ ನಡೆದ ಘಟನೆಯಿಂದಾಗಿ ಆಯಾ ರಾಜ್ಯದ ಪೊಲೀಸ್ ಇಲಾಖೆ ಅಲರ್ಟ್ ಮೋಡ್ನಲ್ಲಿದೆ. ಪ್ರತಿಭಟನಾಕಾರರನ್ನು ಹತ್ತಿಕ್ಕಲು ಪೊಲೀಸ್ ಇಲಾಖೆ ಸಜ್ಜಾಗಿದೆ. ಆದರೂ ಸಹ ಪ್ರತಿಭಟನಾಕಾರರ ಹಾವಳಿ ಹೆಚ್ಚುತ್ತಲೇ ಇದೆ.
ಅಗ್ನಿಪಥ್ ಯೋಜನೆ ವಿರುದ್ಧ ಭುಗಿಲೆದ್ದ ಆಕ್ರೋಶ ಬಿಹಾರದಲ್ಲಿ ಬಸ್ - ಲಾರಿಗೆ ಬೆಂಕಿ: ಬಿಹಾರದಲ್ಲಿ ಇಂದು ‘ಬಂದ್’ಗೆ ಕರೆಕೊಟ್ಟ ಹಿನ್ನೆಲೆ ಆಡಳಿತ ಇಲಾಖೆ ಅಲರ್ಟ್ ಆಗಿದೆ. ಈ ಯೋಜನೆಯನ್ನು ಹಿಂಪಡೆಯುವಂತೆ ಬಿಹಾರದ ಸಂಘಟನೆಗಳು ಕೇಂದ್ರ ಸರ್ಕಾರಕ್ಕೆ 72 ಗಂಟೆಗಳ ಕಾಲಾವಕಾಶ ನೀಡಿವೆ. ಈ ಬಂದ್‌ಗೆ ಆರ್‌ಜೆಡಿ, ಮಹಾಘಟಬಂಧನ್ ಜೊತೆಗೆ ವಿಐಪಿಗಳೂ ಬೆಂಬಲ ನೀಡಿದ್ದಾರೆ. ಬಿಹಾರ ಬಂದ್ ಹಿನ್ನೆಲೆ ಆಡಳಿತ ಮಂಡಳಿ ಹಲವೆಡೆ ಸೆಕ್ಷನ್ 144 ಜಾರಿಗೊಳಿಸಿದೆ. ಇದರ ಹೊರತಾಗಿಯೂ, ಜೆಹಾನಾಬಾದ್‌ನಲ್ಲಿ ಟ್ರಕ್ ಮತ್ತು ಬಸ್‌ಗೆ ಬೆಂಕಿ ಹಚ್ಚಲಾಗಿದೆ.
ಅರ್ವಾಲ್‌ನಲ್ಲಿ ಆಂಬ್ಯುಲೆನ್ಸ್ ದಾಳಿ: ಬಿಹಾರ ಬಂದ್ ವೇಳೆ ಅರ್ವಾಲ್‌ನ ಕುರ್ತಾ ಆಸ್ಪತ್ರೆಯಿಂದ ತೆರಳುತ್ತಿದ್ದ ಆಂಬುಲೆನ್ಸ್ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿದ್ದಾರೆ. ಈ ವೇಳೆ ಆಂಬ್ಯುಲೆನ್ಸ್ ಚಾಲಕ ಹಾಗೂ ರೋಗಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಜಮುಯಿಯ ಝಾಝಾ ಪೊಲೀಸ್ ಠಾಣೆ ವ್ಯಾಪ್ತಿಯ ಸೊಹ್ಜ್ನ ಮೋರ್‌ನಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿದೆ.
ಪಾಟ್ನಾ ಸಮೀಪದ ಮಸೌಧಿಯಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು,ಗಲಭೆಕೋರರಿಂದ ವಿಧ್ವಂಸಕ ಕೃತ್ಯ ಮತ್ತು ಬೆಂಕಿ ಹಚ್ಚಲಾಗಿದೆ. ಈ ವೇಳೆ ಹಲವಾರು ವಾಹನಗಳು ಸುಟ್ಟು ಕರಕಲವಾಗಿವೆ. ಪಾಟ್ನಾ ಸಮೀಪದ ತಾರೇಗಾಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಂದ್ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ಸೆರೆ ಹಿಡಿಯಲಾಗಿದೆ.
ಸುಮಾರು 12 ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಈ ವೇಳೆ ಪೊಲೀಸರು ಗುಂಡು ಹಾರಿಸಿದ್ದರು. ಪ್ರತಿಭಟನಾಕಾರರು ಪ್ರತಿದಾಳಿ ನಡೆಸಿದರು. ಪ್ರತಿಭಟನಾಕಾರರು ರೈಲ್ವೆ ನಿಲ್ದಾಣದಲ್ಲಿ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು. ಅಗ್ನಿಪಥ್ ಯೋಜನೆ ವಿರುದ್ಧದ ಪ್ರತಿಭಟನೆಯಿಂದಾಗಿ ರೈಲು ಸೇವೆಗಳು ಕೆಟ್ಟ ಪರಿಣಾಮ ಬೀರಿವೆ. ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಆಡಳಿತವು ಬಿಹಾರದ ಮೂಲಕ ಹಾದುಹೋಗುವ 22 ರೈಲುಗಳನ್ನು ರದ್ದುಗೊಳಿಸಿದೆ.
ಓದಿ:ಸಿಕಂದರಾಬಾದ್ ಹಿಂಸಾಚಾರ: ಮೃತ ಯುವಕನಿಗೆ 25 ಲಕ್ಷ ಆರ್ಥಿಕ ನೆರವು ಘೋಷಿಸಿದ ಕೆಸಿಆರ್
ಪಂಜಾಬ್ ಕಿಸಾನ್ ಮೋರ್ಚಾ ಕೂಡ ವಿರೋಧ: ಮತ್ತೊಂದೆಡೆ ಸಂಯುಕ್ತ ಕಿಸಾನ್ ಮೋರ್ಚಾ ಪಂಜಾಬ್ ಕೂಡ ಅಗ್ನಿಪಥ್ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದೆ. ಅಗ್ನಿಪಥ್ ಯೋಜನೆ ವಿರುದ್ಧ ಶೀಘ್ರದಲ್ಲೇ ಸಂಘಟನೆಯು ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎಂದು ಸಂಸ್ಥೆಯ ಪರವಾಗಿ ಹೇಳಲಾಗಿದೆ.
ಭಾರತೀಯ ಕಿಸಾನ್ ಯೂನಿಯನ್ ರಾಜ್ಯಾಧ್ಯಕ್ಷ ಜಗಜಿತ್ ಸಿಂಗ್ ದೇಲೆವಾಲ್ ಮಾತನಾಡಿ, ಯುವಕರು ಬೀದಿಗಿಳಿದಿದ್ದು, ಸರಕಾರ ಮೌನವಾಗಿದೆ ಎಂದರು. ಅಖಿಲ ಭಾರತ ಕಿಸಾನ್ ಸಭಾದ ರಾಜ್ಯಾಧ್ಯಕ್ಷ ಬಾಲ್ಕರನ್ ಸಿಂಗ್ ಬ್ರಾರ್ ಮಾತನಾಡಿ, ಅಗ್ನಿಪಥ್ ಯೋಜನೆಯು ಸೇನಾ ರಚನೆಯನ್ನೇ ನಾಶಪಡಿಸುತ್ತದೆ ಎಂದು ಟೀಕಾಪ್ರಹಾರ ನಡೆಸಿದ್ದಾರೆ. ಸರಕಾರ ಕೂಡಲೇ ಅಗ್ನಿಪಥ್ ಯೋಜನೆಯನ್ನು ಹಿಂಪಡೆಯಬೇಕು. ದೇಶದ ಎಲ್ಲ ಯುವಕರಿಗೆ ಖಾಯಂ ಉದ್ಯೋಗ ಕಲ್ಪಿಸಲು ರಾಷ್ಟ್ರೀಯ ಪರ ನೀತಿ ಸಿದ್ಧಪಡಿಸಬೇಕು ಎಂದು ರೈತ ಮುಖಂಡರು ಆಗ್ರಹಿಸಿದ್ದಾರೆ.
ಚೆನ್ನೈ ದಕ್ಷಿಣ ರೈಲ್ವೆ ರದ್ದು: ತಿರುವನಂತಪುರ-ಸಿಕಂದರಾಬಾದ್ ಶಬರಿ ಎಕ್ಸ್‌ಪ್ರೆಸ್ ಅನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ ಎಂದು ದಕ್ಷಿಣ ರೈಲ್ವೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಮೈಸೂರು-ದರ್ಭಂಗಾ ಬಾಗ್ಮತಿ ಎಕ್ಸ್‌ಪ್ರೆಸ್, ಎರ್ನಾಕುಲಂ-ಬರೌನಿ ರಪ್ತಿಸಾಗರ್ ಎಕ್ಸ್‌ಪ್ರೆಸ್ ಮತ್ತು ಬೆಂಗಳೂರು ದಾನಪುರ ಸಂಘಮಿತ್ರ ಎಕ್ಸ್‌ಪ್ರೆಸ್ ಅನ್ನು ಭಾಗಶಃ ರದ್ದುಗೊಳಿಸಲಾಗಿದೆ.
ದಕ್ಷಿಣ ಮಧ್ಯ ರೈಲ್ವೇ ಮತ್ತು ಪೂರ್ವ ಕರಾವಳಿ ರೈಲ್ವೆ ಹೈದರಾಬಾದ್ ವಲಯದಲ್ಲಿ ನಡೆಯುತ್ತಿರುವ ಪ್ರತಿಭಟನೆದಿಂದಾಗಿ ಜೂನ್ 18 ರಂದು ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್, ಹೈದರಾಬಾದ್ ತಾಂಬರಂ-ಚಾರ್ಮಿನಾರ್ ಎಕ್ಸ್‌ಪ್ರೆಸ್, ಬೆಂಗಳೂರು-ದಾನಪುರ ಎಕ್ಸ್‌ಪ್ರೆಸ್, ಎಂಜಿಆರ್ ಚೆನ್ನೈ ಸೆಂಟ್ರಲ್-ಹೈದರಾಬಾದ್ ಎಕ್ಸ್‌ಪ್ರೆಸ್ ಮತ್ತು ತಾಂಬರಂ-ಹೈದರಾಬಾದ್ ಚಾರ್ಮಿನಾರ್ ಎಕ್ಸ್‌ಪ್ರೆಸ್ ಅನ್ನು ರದ್ದುಗೊಳಿಸಲಾಗಿದೆ. ಎರ್ನಾಕುಲಂ-ಪಾಟ್ನಾ ಬೈ-ವೀಕ್ಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಅನ್ನು ಜೂನ್ 20 ರವರೆಗೆ ರದ್ದುಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಉತ್ತರಪ್ರದೇಶದಲ್ಲಿ ಬಸ್‌ಗೆ ಬೆಂಕಿ: ಅಗ್ನಿಪಥ್ ಯೋಜನೆ ವಿರೋಧಿಸುತ್ತಿರುವ ಪ್ರತಿಭಟನಾಕಾರರು ಬಸ್ನಿಂದ ಪ್ರಯಾಣಿಕರನ್ನು ಕೆಳಗಿಳಿಸಿದ ಬಳಿಕ ಧ್ವಂಸಗೊಳಿಸಿ, ಬೆಂಕಿ ಹಚ್ಚಿದರು. ಈ ಬಸ್ ಚಂದೌಲಿ ಡಿಪೋಗೆ ಸೇರಿದ್ದಾಗಿದ್ದು, ಲಖನೌದಿಂದ ವಾರಾಣಸಿಗೆ ಹೋಗುತ್ತಿತ್ತು ಎಂದು ತಿಳಿದು ಬಂದಿದೆ.
ಬದ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪೂರಮುಕುಂದ ಗ್ರಾಮದಲ್ಲಿ ಪ್ರತಿಭಟನಾಕಾರರು ಇನ್ಸ್‌ಪೆಕ್ಟರ್ ವಾಹನವನ್ನೂ ಧ್ವಂಸಗೊಳಿಸಿದ್ದಾರೆ. ಇದಾದ ನಂತರ ಇನ್ಸ್‌ಪೆಕ್ಟರ್ ಮತ್ತು ಅವರ ತಂಡ ಒಡೆದ ವಾಹನದೊಂದಿಗೆ ತೆರಳಿದರು.